ರಬಕವಿ ಬನಹಟ್ಟಿ : ಸರ್ಕಾರದ ಯಾವುದೇ ಕೆಲಸಗಳಿದ್ದರೂ ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವಿರಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ಹಿಪ್ಪರಗಿ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೀನು ಮರಿ ಬಿಡುವ ಕಾರ್ಯಕ್ರಮದಲ್ಲಿ ಹಿಪ್ಪರಗಿ ಜಲಾಶಯದ ಹಿನ್ನೀರಿಗೆ ಮೀನು ಮರಿ ಬಿಟ್ಟು ಅವರು ಮಾತನಾಡಿದರು.
ಹಿಪ್ಪರಗಿ ಜಲಾಶಯ ಹಿನ್ನೀರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿರಂತರವಾಗಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೆ ಹರಿಯುವ ನೀರಿನಲ್ಲಿ ಮಾತ್ರ ಮೀನಿನ ಸಂತಾನೋತ್ಪತ್ತಿಯಾಗುತ್ತದೆ. ಹಿನ್ನೀರಿನಲ್ಲಿ ಮೀನಿನ ಸಂತಾನೋತ್ಪತ್ತಿ ಅಷ್ಟೊಂದು ಪ್ರಮಾಣದಲ್ಲಿ ಆಗಲ್ಲ. ಹೀಗಾಗಿ ಇಲಾಖೆಯಿಂದ ಬೇರಡೆಯಿಂದ ಮೀನಿನ ಮರಿಗಳನ್ನು ತಂದು ಬಿಡಲಾಗುತ್ತಿದೆ ಎಂದರು.
ಮೀನುಗಾರಿಕೆ ಇಲಾಖೆಯಿಂದ ಒಟ್ಟು 4 ಲಕ್ಷ ಮರಿಗಳನ್ನು ತರಲಾಗಿದ್ದು, ಪ್ರತಿಯೊಂದು ಮರಿಗಳು 1 ಇಂಚಿನ ಗಾತ್ರದಿಂದ 4ಇಂಚಿನವರೆಗೆ ಇದ್ದು 3 ರಿಂದ ನಾಲ್ಕು ತಿಂಗಳಲ್ಲಿ ಸುಮಾರು 6 ರಿಂದ 5 ಕೆಜಿ ತೂಕದವರೆಗೆ ಈ ಮರಿಗಳು ಬೆಳೆಯುತ್ತವೆ. ಇದರಿಂದ ಈ ಭಾಗದಲ್ಲಿ ಮೀನುಗಾರರು, ಮೀನು ತಿನ್ನುವವರಿಗೂ ಅನುಕೂಲವಾಗಲಿದೆ ಎಂದರು.
ಮೀನುಗಾರಿಕೆಯೂ ಈಗ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ಮೀನಿನ ಮರಿ ಬಿಡುವದರಿಂದ ಈ ಭಾಗದಲ್ಲಿ ಮೀನುಗಳ ಸಂಖ್ಯೆ ವೃದ್ಧಿಯಾಗಲಿದೆ. ಹಿಪ್ಪರಗಿ ಜಲಾಶಯದ ಹಿನ್ನೀರಿನ ಮೀನುಗಳಿಗೆ ಬೇಡಿಕೆಯೂ ಹೆಚ್ಚಿದೆ ಎಂದರು.
ಆನಂದ ಕಂಪು, ಗಂಗಯ್ಯ ಕುರಣಿ, ಚನ್ನಯ್ಯ ಮಠಪತಿ, ಮಹಾದೇವ ನಾಯಕ, ವೆಂಕಟೇಶ ಕೌಜಲಗಿ, ವರ್ಧಮಾನ ಕೋರಿ, ಪಾಂಡು ಸಾಲ್ಗುಡಿ, ಮುತ್ತುರಾಜ ಶಿರಹಟ್ಟಿ ಹಾಗು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.