ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ವೇಳೆ ತಮ್ಮದೇ ಪಕ್ಷದ ಮಹಿಳಾ ಸದಸ್ಯೆಯನ್ನು ಶಾಸಕ, ಕೆ.ಎಚ್.ಡಿ.ಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಎಳೆದಾಡಿ ಅವಮಾನಿಸದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಮಂಗಳವಾರ ರಾತ್ರಿಯಿಂದ ಎಲ್ಲೆಡೆ ವೈರಲ್ ಆಗಿದೆ.
ಬಿಜೆಪಿಯ ಶಾಸಕರೊಬ್ಬರು, ಮಹಿಳಾ ಸದಸ್ಯೆಯನ್ನು ಈ ಎಳೆದಾಡಿದ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಾಲಿಂಗಪುರ ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 10, ಬಿಜೆಪಿ 13 ಸ್ಥಾನ ಹೊಂದಿದೆ. ನ.9ರಂದು ಸಂಜೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ಅವಕಾಶ ಸಿಗದಕ್ಕೆ ಬೇಸತ್ತು, ಕಾಂಗ್ರೆಸ್ ಸದಸ್ಯರೊಂದಿಗೆ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:‘ಗುರು’ ಡಿಕೆ ಶಿವಕುಮಾರ್ ಗೆ ಚಮಕ್ ಕೊಟ್ಟ ಮುನಿರತ್ನ: ಕೆಲಸ ಮಾಡಿದ ಮುನಿರತ್ನ ‘ಮೌನ’
ಬಿಜೆಪಿಯ ಸದಸ್ಯರಾದ ಗೋದಾವರಿ ಬಾಟ, ಚಾಂದಿನಿ ನಾಯಕ ಹಾಗೂ ಸವಿತಾ ಹುರಕಡ್ಲಿ ಅವರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡು, ಸವಿತಾ ಹುರಕಡ್ಲಿ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ ಗೋದಾವರಿ ಬಾಟ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು.
ತಮ್ಮ ಪಕ್ಷದ ಮೂವರು ಸದಸ್ಯೆಯರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಕ್ಕೆ ಆಕ್ರೋಶಗೊಂಡಿದ್ದ ಶಾಸಕ ಸಿದ್ದು ಸವದಿ ಸಹಿತ, ಬಿಜೆಪಿ ಪ್ರಮುಖರು, ಆ ಮೂವರು ಸದಸ್ಯೆಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಗೇಟ್ ನಲ್ಲೇ ತಡೆಯುವ ಪ್ರಯತ್ನ ಮಾಡಿದರು. ಪೊಲೀಸರ ಎದುರೇ ಶಾಸಕ ಸಹಿತ ಬಿಜೆಪಿ ಮಹಿಳಾ ಸದಸ್ಯೆಯನ್ನು ಎಳೆದಾಡಿ ಅವಮಾನ ಮಾಡಿದ್ದಾರೆ. ಈ ಎಳೆದಾಟದಲ್ಲಿ ಸದಸ್ಯೆ ಚಾಂದಿನಿ ನಾಯಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ನಂತರ ಬಿಜೆಪಿ ಶಾಸಕರ ಎಳೆದಾಟದ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.