Advertisement

ಶಾಸಕ ಸೈಲ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಗೂಂಡಾಗಿರಿಯಂತಿದೆ: ರೂಪಾಲಿ ನಾಯ್ಕ

02:06 PM Nov 07, 2023 | Team Udayavani |

ಕಾರವಾರ: ಹಾಲಿ ಶಾಸಕ ಸತೀಶ್ ಸೈಲ್ ನಿನ್ನೆ ಅಬಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವುದನ್ನು ನೋಡಿದರೆ ಅವರು ಗೂಂಡಾಗಿರಿ ಮಾಡುವಂತಿದೆ  ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

Advertisement

ಕಾರವಾರ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು‌.

ಮಾಜಾಳಿಯ ಚೆಕ್ ಪೊಸ್ಟ್ ಬಳಿ ಸ್ಪಿರಿಟ್‌ ಟ್ಯಾಂಕರ್ ವಶಕ್ಕೆ ಪಡೆದಿರುವ ಬಗ್ಗೆ ಶಾಸಕರು ನಿನ್ನೆ ದೊಡ್ಡ ರಂಪಾಟ ಮಾಡಿದ್ದಾರೆ. ಇದರ ಹಿಂದೆ ಏನು ಮರ್ಮ ಅಡಗಿದೆ ಎನ್ನುವುದು ಜನತೆಗೆ ಗೊತ್ತಾಗಬೇಕಿದೆ. ಈ ಬಗ್ಗೆ ತನಿಖೆ ಆಗಬೇಕು‌ ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಸತೀಶ್ ಸೈಲ್ ಈಗ ಅಬಕಾರಿ ಅಧಿಕಾರಿ ಹಿಡಿದಿರುವ ಸ್ಪಿರಿಟ್‌ ವ್ಯವಹಾರದಲ್ಲಿ ಯಾರ ಜೊತೆ  ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಗೂಂಡಾಗಿರಿ ನಡೆಯುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಟ್ಯಾಂಕರ್ ಬಿಡುಗಡೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಚೆಕ್ ಪೊಸ್ಟ್ ಗೆ ತೆರಳಿ ಶಾಸಕರು ಗೂಂಡಾಗಿರಿ ಮಾಡಿದ್ದಾರೆ. ಒಮ್ಮೆಸ್ಪಿರಿಟ್‌ ಟ್ಯಾಂಕರ್ ಬಿಡುಗಡೆ ಮಾಡುವಂತೆ ಹೇಳುವುದು, ಮತ್ತೊಮ್ಮೆ ಪ್ರಕರಣ ದಾಖಲಿಸುವಂತೆ ಹೇಳುವುದು ಎಷ್ಟು ಸರಿ?  ಇದು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡುವ ಕೃತ್ಯ ಎಂದರು.

Advertisement

ಶಾಸಕರು ಗಲಾಟೆ ಮಾಡುವ ಸಮಯಲ್ಲಿ ಆ ಅಧಿಕಾರಿ ಮೊಬೈಲ್ ವಿಡಿಯೋ ಮಾಡಿಕೊಂಡಾಗ, ಶಾಸಕರು ಯಾಕೆ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನ ಮಾಡಿದರು ಎಂದು ಮಾಜಿ ಶಾಸಕಿ ರೂಪಾಲಿ ಪ್ರಶ್ನಿಸಿದರು.

ಈ ಹಿಂದೆ ಕಾರವಾರದಲ್ಲಿ ಗೂಂಡಾಗಿರಿ ನಡೆದದ್ದನ್ನು ನೋಡಿದ್ದೇವೆ . ಆದರೆ ನಾನು ಶಾಸಕಿಯಾದ ಬಳಿಕ ಗೂಂಡಾಗಿರಿ ನಿಂತಿತ್ತು. ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಶಾಸಕರು ಮಾಡಿರುವ ವರ್ತನೆಯನ್ನ ನೋಡಿದ್ದರೆ, ಮತ್ತೆ ಕಾರವಾರದಲ್ಲಿ ಹಿಂದಿನ ಗೂಂಡಾಗಿರಿ ಮರುಕಳಿಸುವಂತೆ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರವಾರದಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಹೇಳಿದರು.

ಸರಕಾರಿ ಅಧಿಕಾರಿ ಒಳ್ಳೆ ಕೆಲಸ ಮಾಡುವಾಗ ತಡೆಯುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ‌ಸರಕಾರ ಅಧಿಕಾರ ಬಂದ ಬಳಿಕ ಕಾರವಾರ ಸೇರಿದಂತೆ‌ ರಾಜ್ಯಾದ್ಯಂತ ರೌಡಿಸಂ ಹೆಚ್ಚಾಗಿದೆ. ಸರಕಾರಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್,‌ವಕೀಲ ಎನ್ .ವಿ.ನಾಯ್ಕ  ಅವರ ಜೊತೆಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next