ಮೈಸೂರು: ವರುಣಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಅವರ ಸಹೋದರ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಶನಿವಾರ ಪ್ರಚಾರ ನಡೆಸಿದರು.
ವರುಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಐದು ವರ್ಷಗಳ ಕಾಲ ಜನರ ಜತೆಗಿದ್ದು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾದ ತಾವು ಕಳೆದ ಚುನಾವಣೆಗಳಲ್ಲಿ ನೂರಕ್ಕೆ 40 ವೋಟು ತಗೊಂಡು ಬಂದಿದ್ದೀವಿ, ಅವರು ಏನೂ ಮಾಡಲ್ಲ ನೂರಕ್ಕೆ 60 ವೋಟು ತಗೊಂಡು ಬಿಡ್ತಾರೆ. ಚುನಾವಣೆ ಇನ್ನು 2-3 ದಿನ ಇರುವಾಗ ಹಗಲು ರಾತ್ರಿ ಕೆಲಸ ಮಾಡಿ ಚುನಾವಣೆ ಮುಗಿಸಿ ಬಿಡ್ತಾರೆ.
ಅದೂ ಕೂಡ ರಾಜಕಾರಣವೇ ಎಂದು ಆರೋಪಿಸಿದರು. ಇದಕ್ಕೂ ಮುನ್ನ ವರುಣಾ ಕ್ಷೇತ್ರದ ಬಿಜೆಪಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಅಂಬೇಡ್ಕರ್ ತಮ್ಮ ಸಮಾಜದ ಆಸ್ತಿ. ಅಂಥವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ಸಿಗರು ಅವಮಾನ ಮಾಡಿದ್ದರು.
ಅವರಿಗೆ ಭಾರತರತ್ನ ನೀಡಿದ್ದು ಕಾಂಗ್ರೆಸ್ಸೇತರ ಸರ್ಕಾರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವ ಮೂಲಕ ಆ ಪ್ರಶಸ್ತಿಗೆ ಘನತೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ನಾಗರಾಜ ಮಲ್ಲಾಡಿ, ಜಿಪಂ ಸದಸ್ಯ ನೂತನ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.
ನಂತರ ಪುರಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ವಿಜಯೇಂದ್ರ, ನಗರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಮುಖಂಡರಾದ ಕೆ.ಆರ್.ಮೋಹನಕುಮಾರ್, ಗಿರಿಧರ್ ಮೊದಲಾದವರು ಹಾಜರಿದ್ದರು.