Advertisement

ಪಿಡಿಒಗಳ ವರ್ತನೆಗೆ ಶಾಸಕಿ ಪೂರ್ಣಿಮಾ ಕಿಡಿ

03:51 PM Feb 11, 2021 | Team Udayavani |

ಹಿರಿಯೂರು: ರಾಜ್ಯ ಸರ್ಕಾರದಿಂದ ತಾಲೂಕಿಗೆ ಅಲೆಮಾರಿ ವಸತಿ ಯೋಜನೆಯಡಿ 4448 ಮನೆ ಮಂಜೂರಾಗಿದೆ. ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ನಡೆದ ವಸತಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಮನೆ ಮಂಜೂರಾಗಿದೆ. ವಸತಿ ಸಚಿವ ಸೋಮಣ್ಣ ಶೀಘ್ರವೇ ನಗರಕ್ಕೆ ಭೇಟಿ ನೀಡಲಿದ್ದಾರೆ. ಅಷ್ಟರೊಳಗೆ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಸತಿ ಯೋಜನೆ ಫಲಾನುಭವಿಗಳ ಪಟ್ಟಿ ತಯಾರಿಸಲು ಪಿಡಿಒ-ವಸತಿ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಸರ್ಕಾರಿ ಸಂಬಳ ಪಡೆಯುವ ನೀವು ಪ್ರಾಮಾಣಿಕತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರನ್ನು ಕಚೇರಿಗೆ ಅಲೆದಾಡಿಸದೆ ಸಮಸ್ಯೆಗೆ ಸ್ಪಂದಿಸಬೇಕು, ಬೇಜವಾಬ್ದಾರಿಯಿಂದ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ನನ್ನ ಕರೆಯನ್ನೇ ಸ್ವೀಕರಿಸದೇ “ಕಾಲ್‌ ಯು ಬ್ಯಾಕ್‌’ ಎಂಬುದಾಗಿ ಸಂದೇಶ ಕಳುಹಿಸುತ್ತಾರೆ ಎಂದು ಪಿಡಿಒಗಳ ವಿರುದ್ಧ ಹರಿಹಾಯ್ದರು. ವಸತಿ ಸೌಲಭ್ಯ ಕಲ್ಪಿಸಲು ಜಾತಿ-ಆದಾಯ ಪ್ರಮಾಣಪತ್ರ, ಪಡಿತರ ಚೀಟಿ ಗೊಂದಲ, ಜಾಗದ ಸಮಸ್ಯೆಯಿಂದ ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ನಮಗೆ ಮನೆ ಬೇಡ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆಂದು ಪಿಡಿಒಗಳು ಸಭೆಯ ಗಮನಕ್ಕೆ ತಂದರು.

ಇದನ್ನೂ ಓದಿ :ಸ್ಪರ್ಧಾತ್ಮಕ ಪರೀಕ್ಷೆಗೆ ಗುರಿ ಅಗತ್ಯ: ಡೀಸಿ

Advertisement

ಪಿಡಿಒಗಳು ಹಾಗೂ ವಸತಿ ಯೋಜನೆ ಅಧಿಕಾರಿಗಳ ಮೇಲೆ ನಿಮಗೆ ಹಿಡಿತವಿಲ್ಲ, ಪಿಡಿಒಗಳು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಖಾರವಾಗಿ ಹೇಳಬೇಕಾ ಎಂದು ತಾಪಂ ಇಒ ಹನುಮಂತಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಭರಮಗಿರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿ ಎರಡು ವರ್ಷ ಕಳೆದಿದೆ. ವಾರಕ್ಕೆ ಎಷ್ಟು ಬಾರಿ ಹಳ್ಳಿಗಳಿಗೆ ಭೇಟಿ ನೀಡುತ್ತೀರಿ, ಎಷ್ಟು ಜನರ ಸಮಸ್ಯೆ ಆಲಿಸಿದ್ದೀರಿ ಎಂದು ಪಿಡಿಒಗಳನ್ನು ಪ್ರಶ್ನಿಸಿದರು.ಸಭೆಯಲ್ಲಿ ಸತಹಶೀಲ್ದಾರ್‌ ಜಿ.ಎಚ್‌. ಸತ್ಯನಾರಾಯಣ, ವಸತಿ ಯೋಜನೆ ಅಧಿಕಾರಿ ಮಹಾಂತೇಶ್‌, ಪಿಡಿಒ ಚಿಕ್ಕಣ್ಣ, ಸೌಮ್ಯ, ಅರಣ್ಯಾಧಿ ಕಾರಿ ಶ್ರೀಹರ್ಷ, ಲೋಕೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next