Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಶಾಸಕ ಪ್ರೀತಂಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್ ಇತರೆ ಮುಖಂಡರು, ಶ್ರಮಿಕರ ವರ್ಗಗಳಾದ ಪೌರ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಮಾಸಿಕ ಗೌರವಧನ ಹೆಚ್ಚಳವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ರೈತರ ಕಲ್ಯಾಣ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿಯವರು ಆದ್ಯತೆ ನೀಡಿದ್ದಾರೆ ಎಂದರು.
Related Articles
Advertisement
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾದ ಪ್ರಸ್ತಾಪವನ್ನೂ ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು- ಹಳೆಬೀಡು ಪ್ರವಾಸಿ ವೃತ್ತ ರೂಪಿಸುವುದು ಹಾಗೂ ಬೇಲೂರು, ಹಳೆಬೀಡು, ಸೋಮನಾಥಪುರ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದಾರೆ.
ಪ್ರವಾಸಿ ಮಾರ್ಗದರ್ಶಿಗಳಿಗೆ 2000 ರೂ. ಗೌರವಧನ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಹಾಸನ ಜಿಲ್ಲೆಯ ಸುಮಾರು 200 ಮಂದಿ ಪ್ರವಾಸಿ ಮಾರ್ಗದರ್ಶಿಗಳಿಗೆ ಇದರ ಪ್ರಯೋಜನ ದೊರೆಯಲಿದೆ ಎಂದರು.
ಸಿಎಂ ಬಳಿಗೆ ನಿಯೋಗ: ಕಾಡಾನೆಗಳ ಹಾವಳಿ ತಡೆಯಲು ರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಬಜೆಟ್ ನಲ್ಲಿ 100ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಯವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, 300 ಕೋಟಿ ರೂ. ಅನುದಾನ ಕೇಳಿದ್ದೆವು. ಆದರೆ, 100 ಕೋಟಿ ರೂ. ಮಾತ್ರ ಘೋಷಣೆ ಮಾಡಿದ್ದಾರೆ. ಇನ್ನೂ ಹೆಚ್ಚು ಅನುದಾನಕ್ಕಾಗಿ ಕಾಡಾನೆಗಳ ಹಾವಳಿಯಿರುವ ಜಿಲ್ಲೆಗಳ ಶಾಸಕರ ನಿಯೋಗವು ಶೀಘ್ರದಲ್ಲಿಯೇ ಮುಖ್ಯಮಂತ್ರಿಯವರ ಬಳಿ ನಿಯೋಗ ಹೋಗಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಚ್. ಎಂ.ವಿಶ್ವನಾಥ್ ಅವರು ಹೇಳಿದರು.
ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳ ಬೇಕು ಎಂಬ ಮನವಿಗೆ ಸ್ಪಂದಿಸಿ, ಬಜೆಟ್‌ನಲ್ಲಿ 100 ಕೋಟಿ ರೂ.ಘೋಷಣೆ ಮಾಡಿರುವ ಮುಖ್ಯಮಂತ್ರಿ ಅವರನ್ನು ಸಕಲೇಶಪುರಕ್ಕೆ ಆಹ್ವಾನಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಹೆಚ್ಚು ಅನುದಾನ ಪಡೆಯುವ ಪ್ರಯತ್ನ ಮಾಡಲಾಗುವುದು. ಒಂದು ಕಿ.ಮೀ. ರೈಲ್ವೆ ಹಳಿ ಬೇಲಿ ನಿರ್ಮಾಣಕ್ಕೆ 1.25 ಕೋಟಿ ರೂ. ಅಗತ್ಯವಿದೆ. ಈಗ ಜಿಲ್ಲೆಯ ಮಲೆನಾಡು ಭಾಗದಲ್ಲಿ 90 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ.
ರೈಲ್ವೆ ಕಂಬಿಗಳ ಬೇಲಿ ನಿರ್ಮಿಸಿದ ನಂತರ ಕಾಡಾನೆಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರೆ ಕಾಡಾನೆಗಳ ಹಾವಳಿ ಬಹುತೇಕ ನಿವಾರಣೆ ಆಗಲಿದೆ. ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಇದೇ ಮೊದಲ ಬಾರಿಗೆ 100 ಕೋಟಿ ರೂ. ಅನುದಾನ ನಿಗದಿಪಡಿಸಿರುವ ಮುಖ್ಯಮಂತ್ರಿಯವರನ್ನು ಅಭಿನಂದಿಸುವುದಾಗಿಯೂ ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಂ.ಸುರೇಶ್, ನಗರಸಭಾ ಮಾಜಿ ಸದಸ್ಯ ಪ್ರಸನ್ನಕುಮಾರ್, ಜಿಪಂ ಮಾಜಿ ಸದಸ್ಯ ಅಮಿತ್‌ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.