ಗಂಗಾವತಿ: ನಗರದ ಹಿರೇಜಂತಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಶಾಲೆಗೆ ಭೇಟಿ ನೀಡಿ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಅವರು ಕಲಿತ ಶಾಲೆ, ಹಳೆಯ ಗೆಳೆಯರು ಹಾಗೂ ಗುರುಗಳನ್ನು ಕಾಣಲು ಹುಬ್ಬಳ್ಳಿಯಿಂದ ಗಂಗಾವತಿಗೆ ಆಗಮಿಸಿದ್ದರು. ಎರಡು ಬಾರಿ ಶಾಸಕರಾದರೂ ಯಾವುದೇ ಹಮ್ಮಿಬಿಮ್ಮು ಇಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇಡೀ ಶಾಲೆಯನ್ನು ಸುತ್ತಿ ಆ ದಿನಗಳನ್ನು ಸ್ಮರಿಸಿದರು.
ಹಿರೇಜಂತಗಲ್ ಸರಕಾರಿ ಶಾಲೆಯಲ್ಲಿ 1982ರಲ್ಲಿ 7ನೇ ತರಗತಿ ಉತ್ತೀರ್ಣರಾಗಿದ್ದಾರೆ. ಅವರ ತಂದೆ ಹುಬ್ಬಳ್ಳಿಗೆ ವರ್ಗವಾಗಿದ್ದರಿಂದ ಹುಬ್ಬಳ್ಳಿಯಲ್ಲಿ ಶಿಕ್ಷಣ ಮುಂದುರಿಸಿದರು. ನಂತರ ಸಮಾಜ ಸೇವೆಯಲ್ಲಿ ನಿರತರಾಗಿ 2013 ಮತ್ತು 2018ರಲ್ಲಿ ಎರಡು ಬಾರಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿ ಶಾಸಕರಾಗಿದ್ದಾರೆ. ಅಂದು ಇಡೀ ತಾಲೂಕಿಗೆ ಸರಕಾರಿ ಮಾದರಿ ಶಾಲೆಗಳು ಕೆಲವೇ ಇದ್ದವು. ಆಗ ಹಿರೇಜಂತಗಲ್ ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ಗುರುಗಳಿದ್ದರು. ಆದ್ದರಿಂದ ಈ ಶಾಲೆಯಲ್ಲಿ ಅರ್ಧ ಗಂಗಾವತಿಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಇಲ್ಲಿ ಕಲಿತವರು ದೇಶ, ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ.
ಶಾಸಕ ಪ್ರಸಾದ ಅಬ್ಬಯ್ಯ ಕೂಡ ಇಲ್ಲಿ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು ತಮ್ಮ ಮಕ್ಕಳು ಮತ್ತು ಗೆಳೆಯರಾದ ಮುಂಬೈನಲ್ಲಿರುವ ಪ್ರಸನ್ನ ಹಾಗೂ ಸ್ಥಳೀಯ ಅಹಮ್ಮದ್ ಬಾಷಾ ಅವರೊಂದಿಗೆ ಆಗಮಿಸಿ ಕಳೆಯ ನೆನಪುಗಳನ್ನು ಮೆಲುಕು ಹಾಕಿದರು.