ಹನೂರು (ಚಾಮರಾಜನಗರ): ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ, ಅಲ್ಲದೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದ್ದು ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವಂತೆ ಶಾಸಕ ನರೇಂದ್ರ ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ಹೊರವಲಯದ ಚಿಂಚಳ್ಳಿ ರಸ್ತೆಯಲ್ಲಿ 3.25 ಕೋಟಿ ರೂ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಿರ್ಮಾಣವಾಗುತ್ತಿರುವ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ನರೇಂದ್ರ ಕಟ್ಟಡದ ನೀಲನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿ ಕೆಲವೆಡೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಮೆಟ್ರಕ್ ನಂತರ ಬಾಲಕಿಯರು ವಸತಿ ನಿಲಯ ಸಮಸ್ಯೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವುದರ ಸಂಬಂಧ ಅಗತ್ಯ ಮಾಹಿತಿ ಪಡೆದಾಗ ವಸತಿ ನಿಲಯ ಇಲ್ಲದ ಹಿನ್ನೆಲೆ ಸಮಸ್ಯೆಯಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದರು. ಈ ಹಿನ್ನೆಲೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ಚರ್ಚಿಸಿ ಕೂಡಲೇ ಪಟ್ಟಣಕ್ಕೆ 100 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತಹ ವಸತಿ ನಿಲಯ ಮಂಜೂರು ಮಾಡುವಂತೆ ಮನವಿ ಮಾಡಿ ಅನುದಾನ ಬಿಡುಗಡೆಗೊಳಿಸಲಾಗಿತ್ತು. 2018ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರು ನಿಗದಿತ 9 ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಅಲ್ಲಲ್ಲಿ ಲೋಪದೋಷಗಳು ಕಂಡುಬರುತ್ತಿದ್ದು ಕ್ಯೂರಿಂಗ್ ಮತ್ತು ಪ್ಲಾಸ್ಟರಿಂಗ್ ಸಮರ್ಪಕವಾಗಿಯಿಲ್ಲ. ಆದುದರಿಂದ ಗುಣಮಟ್ಟ ಕಾಯ್ದುಕೊಂಡು ಉತ್ತಮವಾಗಿ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಎಇಇ ನಾಗರಾಜ್‍ನಾಯ್ಕ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳ ಜೊತೆ ಚರ್ಚಿಸಿ ಗುಣಮಟ್ಟಕ್ಕೆ ಒತ್ತು ನೀಡಿ ಶೀಘ್ರವಾಗಿ ಕಾಮಗಾರಿ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದರು. ಇದೇ ವೇಳೆ ಗುತ್ತಿಗೆದಾರರು ಡಿಸೆಂಬರ್ ಒಳಗಾಗಿ ಕಾಮಗಾರಿ ಮುಗಿಸಿ ಕೊಡುವ ಭರವಸೆ ನೀಡಿದರು.
ತಾಂತ್ರಿಕ ಸಲಹೆಗಾರ ಅಲ್ಕಾನ್, ಎಇ ಮಂಜುನಾಯಕ್ ಇನ್ನಿತರರು ಹಾಜರಿದ್ದರು.