ಯಾದಗಿರಿ: ಸರ್ಕಾರ ಪತನ, ಸಿಎಂ ಕುರ್ಚಿಗೆ ಗುದ್ದಾಟ ನಡೆದಿದೆ, ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದೆ ಹಾಗೂ ಕೊವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂಬೆಲ್ಲ ಮಾತುಗಳು ಬರೀ ಗಾಳಿ ಸುದ್ದಿ ಇದ್ಯಾವುದು ನಿಜವಲ್ಲ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ನರಸಿಂಹ ನಾಯಕ ಹೇಳಿದರು.
ಜಿಲ್ಲೆಯ ಸುರಪುರದ ತಮ್ಮ ನಿವಾಸದ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬೇಕೆನ್ನುವುದು ವಿರೋಧ ಪಕ್ಷದವರ ಷಡ್ಯಂತ್ರವಾಗಿದ್ದು, ಸರ್ಕಾರ ಸುಭದ್ರವಾಗಿದೆ ಯಡಿಯೂರಪ್ಪನವರೇ ನಮ್ಮ ನಾಯಕರು ಇದರಲ್ಲಿ ಎರಡು ಮಾತಿಲ್ಲ ಎಂದರು.
ತಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಆದರೆ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ ಸದ್ಯಕ್ಕೆ ಗೌರಯುತವಾದ ಹುದ್ದೆ ದೊರೆತಿದೆ ಅದನ್ನು ಸಮರ್ಥವಾಗಿ ನಿಭಾಯಿಸಿ ಹೆಚ್ಚಿನ ಅಭಿವೃದ್ದಿ ಮಾಡಿ ತೋರಿಸುತ್ತೇನೆ ಎಂದರು.
ಸಚಿವ ಸ್ಥಾನ ನೀಡುವುದಾದರೆ ಮುಂದೆ ನನ್ನ ಕೆಲಸ ನೋಡಿ ಕೊಡಲಿ ಎಂದು ಹೇಳುವ ಮೂಲಕ ನರಸಿಂಹ ನಾಯಕ ಅವರು ತಾವೂ ಒಬ್ಬ ಸಚಿವ ಸ್ಥಾನಾಕಾಂಕ್ಷಿ ಎಂಬ ಸುಳಿವನ್ನು ಪರೋಕ್ಷವಾಗಿ ನೀಡಿದರು.
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗದಿರುವುದಕ್ಕೆ ಅಪಾರ್ಥ ಕಲ್ಪಿಸಬೇಕಿಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ಕೆಲಸದ ಮೇಲೆ ಬೇರೆ ಕಡೆಗೆ ಹೋಗಿದ್ದೆ ಹೊರತು ಉದ್ದೇಶಪೂರ್ವಕವಾಗಿ ಉತ್ಸವ ತಪ್ಪಿಸಿಕೊಂಡಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.