Advertisement

ಸಿ.ಎಂ. ಬದಲಾವಣೆ ಅಸಾಧ್ಯ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಶಾಸಕ ನಡಹಳ್ಳಿ

03:39 PM May 27, 2021 | Team Udayavani |

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಬರೀ ಊಹಾಪೋಹ. ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ಯಾರೋ ಒಂದಿಬ್ಬರು ಮಾಡುವ ಷಡ್ಯಂತ್ರದಿಂದ ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಅಸಾಧ್ಯ. ಷಡ್ಯಂತ್ರ ನಡೆಸುವ ಸಚಿವರನ್ನು ಸಂಪುಟದಿಂದ ಕೈ ಬಿಡಲು ಆಗ್ರಹಿಸುವ ಮೂಲಕ ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷರಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.

Advertisement

ಗುರುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ತಮ್ಮ ಗೃಹ ಕಛೇರಿ ದಾಸೋಹ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆ ವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಯಡಿಯೂರಪ್ಪ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.

ನಾನೂ ಸೇರಿದಂತೆ ಬಿಜೆಪಿ ಎಲ್ಲ ಶಾಸಕರೂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ವಿಶ್ವಾಸ ಹೊಂದಿದ್ದಾರೆ. ಸಚಿವ ಸಂಪುಟದಲ್ಲಿ ಇದ್ದುಕೊಂಡು ಸಿಎಂ ಬದಲಾವಣೆಗೆ ಷಡ್ಯಂತ್ರ ನಡೆಸುತ್ತಿರುವ ಕೂಡಲೇ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ನಾಯಕತ್ವದ ವಿರುದ್ಧ ಧ್ವನಿ ಎತ್ತುವ ಶಾಸಕರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಸಿಎಂ ಬಿಎಸ್ ವೈ ಬದಲಾವಣೆ ರಾಜ್ಯದ ಜನತೆ ಸಹಿಸುವುದಿಲ್ಲ: ಶಾಸಕ ಪರಣ್ಣ ಮುನವಳ್ಳಿ

ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ಸಿಕ್ಕಿದ್ದು ಭಿಕ್ಷೆಯಲ್ಲ ಅದು ಅವರ ಪರಿಶ್ರಮದ ಫಲ. ಇವರ ನಾಯಕತ್ವದಲ್ಲಿ ವಿಶ್ವಾಸ ಇಟ್ಟಿರುವ ಪಕ್ಷದ ರಾಷ್ಟ್ರೀಯ ನಾಯಕರ ವಿಶ್ವಾಸ ಹಾಗೂ ರಾಜ್ಯದ ಜನತೆಯ ಬೆಂಬಲದ ಪ್ರತೀಕ. ಇದನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. 45 ವರ್ಷಗಳಿಂದ ಅನಂತ್ ಕುಮಾರ್ ಜೊತೆ ಸೇರಿ ಯಡಿಯೂರಪ್ಪ ಅವರು ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಈ ಮಟ್ಟಕ್ಕೆ ತಂದಿದ್ದಾರೆ. ಅವರೊಬ್ಬ ಪ್ರಶ್ನಾತೀತ ನಾಯಕರು. ಅವರ ವಿರುದ್ಧ ನಡೆಯುವ ಷಡ್ಯಂತ್ರ ಪಕ್ಷ ದ್ರೋಹ. ಸಮಸ್ಯೆ ಇದ್ದರೆ ಯಡಿಯೂರಪ್ಪ ಅವರನ್ನು ನೇರವಾಗಿ ಭೇಟಿ ಮಾಡಿ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕೆ ಹೊರತು ಷಡ್ಯಂತ್ರ ನಡೆಸಬಾರದು ಎಂದು ಅತೃಪ್ತಿ ಹೊರಹಾಕಿದ ಶಾಸಕರಿಗೆ ಕಿವಿ ಮಾತು ಹೇಳಿದರು.

Advertisement

ಮುಖ್ಯಮಂತ್ರಿ ವಿರುದ್ಧ ನಡೆಸುವ ಷಡ್ಯಂತ್ರ, ಅಪಪ್ರಚಾರ ಪಕ್ಷದ ಘನತೆಗೆ ಧಕ್ಕೆ ತರುತ್ತದೆ. 2018 ವಿಧಾನಸಭೆ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೇಟ್ ಕೊಟ್ಟು, ನನ್ನ ಪರ ಪ್ರಚಾರ ನಡೆಸಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಶಾಸಕ ಎನ್ನುವ ಹೆಗ್ಗಳಿಕೆ ನನಗೆ ದಕ್ಕಿಸಿದ್ದು ಯಡಿಯೂರಪ್ಪ. ಅವರ ನಾಯಕತ್ವದಲ್ಲಿ ನನ್ನ ಸಂಪೂರ್ಣ ವಿಶ್ವಾಸ ಇದೆ. ಒಂದಿಬ್ಬರನ್ನು ಹೊರತುಪಡಿಸಿ ನನ್ನಂತೆ ಎಲ್ಲ ಶಾಸಕರೂ ವಿಶ್ವಾಸ ಇರಿಸಿದ್ದಾರೆ. ನಮ್ಮೆಲ್ಲ ಶಾಸಕರ ಬೆಂಬಲ ಇರುವ ವರೆಗೂ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಬಿಜೆಪಿ ಶುದ್ಧ ಸರ್ಕಾರವಾಗಿ ಉಳಿದಿಲ್ಲ, ಮೂರು ಗುಂಪಿನ ಸರ್ಕಾರವಾಗಿದೆ : ಸಿ.ಪಿ ಯೋಗೇಶ್ವರ್

ಪಕ್ಷದ ರಾಷ್ಟ್ರೀಯ ನಾಯಕರು ಇಲ್ಲಿನ ಬೆಳವಣಿಗೆ ಗಮನಿಸುತ್ತಿದ್ದು ಷಡ್ಯಂತ್ರ ನಡೆಸುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.  ಯಡಿಯೂರಪ್ಪ ರಾಜಕೀಯ ಅನುಭವ ದೇಶ ಮಟ್ಟದಲ್ಲಿ ಮಾಜಿ ಪ್ರಧಾನಿ ದಿ. ವಾಜಪೇಯಿ, ಬಿಜೆಪಿ ಭೀಷ್ಮ ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ, ಪ್ರಧಾನಿ ಮೋದಿ, ಅಮಿತ್ ಶಾ ಅವರಂತೆ ಪ್ರಧಾನ ಸ್ಥಾನವಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹೇಗೆ ವರ್ಚಸ್ಸಿನ ಮಾದರಿಯಲ್ಲಿದೆಯೋ ಕರ್ನಾಟಕದಲ್ಲೂ ಯಡಿಯೂರಪ್ಪ ವರ್ಚಸ್ಸಿನಿಂದ ಬಿಜೆಪಿ ಬಲಿಷ್ಠವಾಗಿದೆ. ಹೀಗಾಗಿ ಯಾರೋ ಒಂದಿಬ್ಬರು ಹೇಳಿದ ಮಾತ್ರಕ್ಕೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next