Advertisement

ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ: ಶಾಸಕ ಹರತಾಳು ಹಾಲಪ್ಪ

03:34 PM Jul 24, 2022 | Suhan S |

ಸಾಗರ: ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ. ಮಲೆನಾಡಿನ ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸೋಮವಾರ ನವದೆಹಲಿಯಲ್ಲಿ ಮಲೆನಾಡು ಭಾಗದ ಸಂಸದರು ಮತ್ತು ಶಾಸಕರು ಅರಣ್ಯ ಮತ್ತು ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ನಗರಸಭೆ ಆವರಣದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಕೈಬಿಡಲು ರಾಜ್ಯ ಸರ್ಕಾರ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಈ ವರದಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮಲೆನಾಡು ಭಾಗದಲ್ಲಿ ರಕ್ತಕ್ರಾಂತಿಯಾಗುತ್ತದೆ ಎಂದು ಮನವಿ ಸಲ್ಲಿಸಲಾಗಿತ್ತು. ಆಗ ವರದಿಯನ್ನು ಹಿಂದಕ್ಕೆ ಪಡೆದಿದ್ದರು. ಇದೀಗ ಮತ್ತೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ನನ್ನ ತಾಯಿಗೂ ಇ ಡಿಯವರು ಕಿರುಕುಳ ನೀಡಿದ್ದರು: ಡಿ.ಕೆ.ಶಿವಕುಮಾರ್

ಜು. 18 ಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾಗಿರುವ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಲೆನಾಡಿನ ಎಲ್ಲ ಶಾಸಕರು ಪಾಲ್ಗೊಂಡು ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಕೇಂದ್ರದ ಅರಣ್ಯ ಮಂತ್ರಾಲಯ ಮತ್ತೊಂದು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ವರದಿಯನ್ನು ಕೈಬಿಡುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ವರದಿಯನ್ನು ಯಥಾವತ್ತಾಗಿ ಕೈಬಿಡಲು ಒತ್ತಾಯಿಸಲು ಸಂಸದ ಬಿ.ವೈ.ರಾಘವೇಂದ್ರ, ಶೋಭಾ ಕರಂದ್ಲಾಜೆ, ಆರಗ ಜ್ಞಾನೇಂದ್ರ, ಸ್ಪೀಕರ್ ಕಾಗೇರಿ ಸೇರಿದಂತೆ ಮಲೆನಾಡಿನ ಎಲ್ಲ ಶಾಸಕರು ದೆಹಲಿಗೆ ನಿಯೋಗದ ಮೂಲಕ ಹೋಗುತ್ತಿದ್ದೇವೆ. ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ನಿಯೋಗದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ ಎಂದರು.

Advertisement

ತಾಲೂಕಿನಲ್ಲಿ 125 ಕ್ಕೂ ಹೆಚ್ಚು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪಟ್ಟಿಗೆ ಸೇರಿಸಲಾಗಿದೆ. ಕಸ್ತೂರಿ ರಂಗನ್ ಬಗ್ಗೆ ನಮಗೆ ಗೌರವವಿದೆ. ಆದರೆ ವರದಿ ತಯಾರಿಸುವಾಗ ಸ್ಥಳಕ್ಕೆ ಭೇಟಿ ಕೊಡಲಿಲ್ಲ. ಸೆಟ್‌ಲೈಟ್ ಮೂಲಕ ಎಲ್ಲೆಲ್ಲಿ ಹಸಿರು ಕಾಣುತ್ತದೆಯೋ ಅದನ್ನು ಪಟ್ಟಿಗೆ ಸೇರಿಸಲಾಗಿದೆ. ಸೆಟ್‌ಲೈಟ್‌ನಲ್ಲಿ ನೋಡಿದರೆ ಅಡಿಕೆ ತೋಟ, ರಬ್ಬರ್ ಪ್ಲಾಂಟೇಶನ್ ಎಲ್ಲವೂ ಹಸಿರಾಗಿ ಕಾಣುತ್ತದೆ. ಇದರ ಆಧಾರದ ಮೇಲೆ ಮಲೆನಾಡು ಭಾಗಗಳನ್ನು ಸೇರಿಸಿದ್ದು ಅವೈಜ್ಞಾನಿಕ ಕ್ರಮವಾಗಿದೆ. ಇದನ್ನು ಮನವರಿಕೆ ಮಾಡಲು ನವದೆಹಲಿಗೆ ಹೋಗಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next