Advertisement

Congress ಸರಕಾರದ ವಿರುದ್ಧ ಶಾಸಕ ಗಂಟಿಹೊಳೆ ಧರಣಿ

11:45 PM Aug 12, 2024 | Team Udayavani |

ಬೈಂದೂರು: ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರಲಾಗುತ್ತಿದೆ ಹಾಗೂ ಜಿಲ್ಲಾಧಿಕಾರಿಗಳು ಕಾಂಗ್ರೆಸ್‌ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಸೋಮವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

Advertisement

ಶಾಸಕರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಹೋಗದಂತೆ ಅಧಿಕಾರಿಗಳಿಗೆ ಕರೆ ಮಾಡಿ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಇದರಿಂದ ಕೆರಳಿದ ಶಾಸಕರು ಜಿಲ್ಲಾಡಳಿತದ ವಿರುದ್ಧವೇ ಬೈಂದೂರು ತಾಲೂಕು ಆಡಳಿದ ಸೌಧ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ಆರಂಭಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕರು, ಜನ ಕರೆದಲ್ಲಿಗೆ ನಾನು ಹೋಗಬೇಕು. ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ಜನಸೇವೆಗೆ. ಸರಕಾರ ನೀಡಿದ ಒಂದು ಕಚೇರಿಯಲ್ಲಿ ದರ್ಬಾರ್‌ ನಡೆಸುವ ವ್ಯಕ್ತಿತ್ವ ನನ್ನದಲ್ಲ.ತಾಲೂಕಿನ ಜನತೆಯ ಉಪಯೋಗಕ್ಕಾಗಿ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಚೇರಿ ತೆರೆದಿದ್ದೇನೆ. ಈ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿರುವುದು ಸರಿಯಲ್ಲ.

ಜಿಲ್ಲಾಧಿಕಾರಿಗಳಿಗೆ ರಾಜಕೀಯ ಒತ್ತಡವಿದ್ದರೆ ನೇರ ಹೇಳಿ ಬಿಡಲಿ. ಶಾಸಕನ ಹಕ್ಕು ಮೊಟಕುಗೊಳಿಸುತ್ತಿರುವ ಆಡಳಿತ ಯಂತ್ರದ ವಿರುದ್ಧ ಅಹೋರಾತ್ರಿ ಧರಣಿಯ ಸಮರ ಸಾರಿದ್ದೇನೆ. ಸ್ಪಷ್ಟನೆ ಲಭಿಸುವವರೆಗೆ ವಿರಮಿಸುವ ಮಾತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಹಶೀಲ್ದಾರರು ಮನ ಒಲಿಸುವ ಪ್ರಯತ್ನ ಮಾಡಿದರೂ ಒಪ್ಪದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಬಿಜೆಪಿ ಮುಖಂಡ ಸುರೇಶ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next