ಬೆಂಗಳೂರು: ಮಂಗಳೂರು ತಾಲೂಕಿನ ಸುರತ್ಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದರು.
ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಶಾಸಕರು, ಮಂಗಳೂರು ತಾಲೂಕಿನಲ್ಲಿ 2 ಸಮುದಾಯ ಆರೋಗ್ಯ ಕೇಂದ್ರಗಳಿವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ, ಒಂದೂ ಸಮುದಾಯ ಆರೋಗ್ಯ ಕೇಂದ್ರ ಇಲ್ಲ. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಒಂದು ವರ್ಷದ ಹಿಂದೆ ಡಿಎಚ್‌ಒ ವರದಿ ಕೊಟ್ಟಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಮಧ್ಯಪ್ರವೇಶಿಸಿದ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಮಂಗಳೂರು, ಮೂಲ್ಕಿ ಹಾಗೂ ಮೂಡಬಿದಿರೆ ಮೂರು ಪ್ರತ್ಯೇಕ ತಾಲೂಕುಗಳಾಗಿವೆ. ಮೂಡಿಬಿದರೆ ಹಾಗೂ ಮೂಲ್ಕಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅದು ಮಂಗಳೂರು ತಾಲೂಕಿಗೆ ಸಂಬಂಧಪಡಲ್ಲ. ಆದ್ದರಿಂದ ಸುರಕತ್ಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು ಬಹಳ ಅಗತ್ಯವಿದೆ ಎಂದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ (ಐಪಿಎಚ್‌ಎಸ್) ಮಾರ್ಗಸೂಚಿ ಪ್ರಕಾರ ಸಮತಟ್ಟು ಪ್ರದೇಶದಲ್ಲಿ 1.20 ಲಕ್ಷ ಜನಸಂಖ್ಯೆಗೆ, ಗುಡ್ಡಗಾಡು ಪ್ರದೇಶದಲ್ಲಿ 80 ಸಾವಿರ ಜನಸಂಖ್ಯೆಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ. 2021ರ ಸಂಭಾವ್ಯ ಜನಸಂಖ್ಯೆಅನುಸಾರ ಮಂಗಳೂರು ತಾಲೂಕಿನ ಜನಸಂಖ್ಯೆ 1.95 ಲಕ್ಷ ಇದೆ. ಐಪಿಎಚ್‌ಎಸ್ ಮಾರ್ಗಸೂಚಿ ಪ್ರಕಾರ 2 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದ್ದು, ಈಗಾಗಲೇ ಈಗಾಗಲೇ ಮಂಗಳೂರು ತಾಲೂಕಿನಲ್ಲಿ 2 ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದರಿಂದ 3ನೇ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅವಕಾಶವಿಲ್ಲ. ಆದರೆ, ಹೊಸದಾಗಿ ಶಾಸಕರ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು. ಹೊಸ ತಾಲೂಕು ಆಗಿರುವ ಬಗ್ಗೆಯೂ ಶಾಸಕರು ಗಮನಕ್ಕೆ ತಂದಿದ್ದಾರೆ. ಈ ವಿಚಾರವಾಗಿ ಶಾಸಕರೊಂದಿಗೆ ಸಭೆ ನಡೆಸಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.