ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಯ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದಕ್ಕಾಗಿ ಮಂಡಳಿಯ ಅಧ್ಯಕ್ಷರಾಗಿರುವ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಕೃತಜ್ಞತೆ ಸಲ್ಲಿಸಿದ್ದು, ಮಂಡಳಿಗೆ ಹೊಸ ಅಧ್ಯಕ್ಷರನ್ನು ಸಿಎಂ ನೇಮಕ ಮಾಡಿ ಆದೇಶಿಸಬಹುದು ಎಂದಿದ್ದಾರೆ.
ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷ ಆಡಳಿತ ನಿಭಾಯಿಸಿರುವುದು ತೃಪ್ತಿ ತಂದಿದೆ. ಬಹು ಮುಖ್ಯವಾಗಿ ಮಂಡಳಿಯ ನಿಯಮದಂತೆ ಅಧ್ಯಕ್ಷರ ಅವಧಿ ಒಂದು ವರ್ಷ ಮಾತ್ರ ಇದ್ದು, ಕಳೆಸ 2020ರ ಆಗಸ್ಟ್ 3ರಂದು ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದಾಗಿ ಅಪ್ಪುಗೌಡ ತಿಳಿಸಿದ್ದಾರೆ.
ಸಚಿವ ಸ್ಥಾನ ಹಾದಿ ಸುಗಮವೇ?:
ಕಳೆದ ವರ್ಷ ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ತದನಂತರ ಕೊವಿಡ್ ಸಂದರ್ಭದಲ್ಲಿ ಮಂಡಳಿ ವ್ಯಾಪ್ತಿಯಲ್ಲಿ ತಿರುಗಾಡಿ ಸಭೆ ನಡೆಸಿ ಜಿಲ್ಲೆಗಳಿಗೆ ಬೇಕಾಗಿರುವ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದಲ್ಲದೇ ಚಿಕಿತ್ಸೆ ಸಲುವಾಗಿ ಅಗತ್ಯ ಅನುದಾನ ಸಹ ನೀಡಲಾಗಿದೆ. ಒಟ್ಟಾರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಒಟ್ಟಾರೆ ಒಂದು ವರ್ಷದ ಮಂಡಳಿಯ ಕಾರ್ಯಭಾರ ತೃಪ್ತಿ ತಂದಿದ್ದಾರೆ ಎಂದಿದ್ದಾರೆ.
ಒಂದು ವರ್ಷದ ಅವಧಿ ಮುಗಿದಿದೆ ಎಂಬುದಾಗಿ ಹೇಳಿದ್ದಲ್ಲದೇ ಕೃತಜ್ಞತೆ ಸಲ್ಲಿಸಿರುವುದು ಜತೆಗೆ ನೂತನ ಸಿಎಂ ಬೇರೆಯವರನ್ನು ಅದ್ಯಕ್ಷ ರನ್ನು ನೇಮಕ ಮಾಡುವರು ಎಂದು ಹೇಳುವ ಮೂಲಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬ ಸಂದೇಶ ಈ ಮೂಲಕ ತಿಳಿಸಿರುವುದು ಸ್ಪಷ್ಟ ಪಡಿಸುತ್ತದೆ. ಬಹು ಮುಖ್ಯವಾಗಿ ಹೀಗೆ ಹೇಳುವ ಮೂಲಕ ಸಚಿವ ಸ್ಥಾನದ ಹಾದಿ ಸುಗಮವಾಗಿದೆ ಎಂಬುದನ್ನು ವರಿಷ್ಠರಿಗೆ ತಿಳಿಸಲು ಹೇಳಿಕೆ ನೀಡಿದ್ದಾರೆನ್ನಲಾಗುತ್ತಿದೆ.
ಕಳೆದ ವರ್ಷ ಹೊರಡಿಸಲಾದ ಕೆಕೆಆರ್ ಡಿಬಿ ಅಧ್ಯಕ್ಷರ ನೇಮಕದ ಆದೇಶವು ಮುಂದಿನ ಆದೇಶ ವರೆಗೆ ಎಂಬುದಾಗಿದೆ. ಹೊಸದಾಗಿ ನೇಮಕವಾಗುವರೆಗೂ ದತ್ತಾತ್ರೇಯ ಪಾಟೀಲ್ ಮುಂದುವರೆಯಲಿದ್ದಾರೆ.