Advertisement

ಬಿಡುವಿಲ್ಲದಂತೆ ಕೋವಿಡ್‌ಗೆ ಶ್ರಮಿಸಿದ್ದೇನೆ

11:20 AM Jun 08, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಕೇರಳ ಮತ್ತು ತಮಿಳುನಾಡು ಗಡಿಗಳನ್ನು ಹಂಚಿಕೊಂಡಿದೆ. ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯನ್ನೂ ಒಳಗೊಂಡಿರುವುದು ಈ ಕ್ಷೇತ್ರದ ವಿಶೇಷ. ಈ ಕ್ಷೇತ್ರದ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಅವರು ಜಿಲ್ಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಏಕೈಕ ಶಾಸಕ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌-19 ಎರಡನೇ ಅಲೆಯನ್ನು ಎದುರಿಸಲು ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌ ಹೇಗೆ ಕೆಲಸ ಮಾಡಿದ್ದಾರೆ ಎಂಬುದರ ಕುರಿತು, ಉದಯವಾಣಿ ನಡೆಸಿದ ಕಿರು ಸಂದರ್ಶನ.

Advertisement

 ನಿಮ್ಮ ಕ್ಷೇತ್ರದಲ್ಲಿ ಪ್ರಸ್ತುತ ಕೋವಿಡ್‌-19 ಪರಿಸ್ಥಿತಿ ಹೇಗಿದೆ?

ಈಗ ಬಹಳಷ್ಟು ನಿಯಂತ್ರಣಕ್ಕೆ ಬಂದಿದೆ. ಕಳೆದ 15 ದಿನಗಳ ಹಿಂದೆ, ನಮ ಕ್ಷೇತ್ರದಲ್ಲೇ ದಿನಕ್ಕೆ 250-300 ಕೇಸ್‌ ಬರ್ತಾ ಇತ್ತು. ಈಗ ಪ್ರತಿ ದಿನ 50 ರೊಳಗೆ ಪ್ರಕರಣಗಳು ಬರುತ್ತಿವೆ. ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿ ತೀರ್ಮಾನದ ನಂತರ ಕೋವಿಡ್‌ ಕೇರ್‌ ಸ್ಥಾಪಿಸಿದ್ದೇವೆ. ನಮ್ಮ ತಾಲೂಕಿನಲ್ಲಿ 5 ಕೋವಿಡ್‌ ಕೇರ್‌ ಇದೆ. ಕೋವಿಡ್‌ ಕೇರ್‌ಗಳಲ್ಲಿ 650 ಬೆಡ್‌ ಸಾಮರ್ಥ್ಯ ಇದೆ. ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್‌ ಬೆಡ್‌ಗಳಿವೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಹೋಂ ಐಸೋಲೇಷನ್‌ ನಿಲ್ಲಿಸಿದ ಬಳಿಕ ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಕೋವಿಡ್‌ ನಿರ್ವಹಣೆಗೆ ಶಾಸಕರಾಗಿ ಏನೇನು ಕೆಲಸ ಮಾಡಿದಿರಿ?

ನನ್ನ ಕ್ಷೇತ್ರದಲ್ಲಿ 40 ಗ್ರಾಮ ಪಂಚಾಯಿತಿಗಳಿವೆ. ಈ ಎಲ್ಲಾ 40 ಗ್ರಾಪಂಗಳಲ್ಲೂ ಕೋವಿಡ್‌ ಕಾರ್ಯಪಡೆ ಸಮಿತಿ ಸಭೆ ನಡೆಸಿದ್ದೇನೆ. ಗ್ರಾಪಂಗಳಲ್ಲಿ ಸಭೆಗಳನ್ನು ನಡೆಸಿ, ಕೋವಿಡ್ ಮುಕ್ತ ಪಂಚಾಯಿತಿ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದು ಮನವಿ ಮಾಡಲಾಯಿತು. ಸಭೆಯಲ್ಲಿ ವೈದ್ಯರು, ಎಎನ್‌ಎಂಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಪಂ ಸದಸ್ಯರೊಡನೆ ಚರ್ಚಿಸಲಾಯಿತು. ಹೋಂ ಐಸೋಲೇಷನ್‌ ಮಾಡಿ, ಟೆಸ್ಟ್‌ಗಳನ್ನು ಹೆಚ್ಚಿಸಿ, ಪ್ರಾಥಮಿಕ ಸಂಪರ್ಕಿತರನ್ನೂ ಪರೀಕ್ಷಿಸಬೇಕು. ಲಸಿಕೆ ನೀಡಿಕೆ ಹೆಚ್ಚಿಸಬೇಕು ಎಂದು ಸಲಹೆ ಸೂಚನೆ ನೀಡಿದೆ. ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಭೇಟಿ ನೀಡುತ್ತಿದ್ದೇನೆ. ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಆಹಾರದ ಗುಣಮಟ್ಟ ಪರೀಕ್ಷಿಸಲು ಪ್ರತಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಊಟ ಮಾಡಿದೆ. ರಸ ಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿನ ಸಮಸ್ಯೆಗಳನ್ನು ಆಲಿಸಿ, ಅಲ್ಲಿನ ಕುಂದು ಕೊರತೆ ನಿವಾರಿಸಲು ಶ್ರಮಿಸಿದ್ದೇನೆ.

Advertisement

ಶಾಸಕರ ನಿಧಿಯಿಂದ ಕೋವಿಡ್‌ ನಿರ್ವಹಣೆಗೆ ಎಷ್ಟು ಹಣ ನೀಡಿದ್ದೀರಿ? ಶಾಸಕರ ನಿಧಿಯಿಂದ ಕೋವಿಡ್‌ ನಿರ್ವಹಣೆಗೆ 50 ಲಕ್ಷ ರೂ. ನೀಡಿದ್ದೇನೆ. ಇದರಲ್ಲಿ ಆ್ಯಂಬುಲೆನ್ಸ್‌, ಶವ ಸಾಗಿಸುವ ವಾಹನ, ಆಸ್ಪತ್ರೆಗೆ ಬೇಕಾದ ಪರಿಕರಗಳನ್ನು ಖರೀದಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಸ್ನೇಹಿತರಿಗೆ ಹೇಳಿ ಆಕ್ಸಿಜನ್‌ ಸಾಂದ್ರಕಗಳನ್ನು ಕೊಡಿಸಿದ್ದೇನೆ. ಸಂಘ ಸಂಸ್ಥೆಗಳಿಂದ ಆಹಾರ ಕಿಟ್‌ ವಿತರಿಸಿದ್ದೇನೆ. ಒಂದು ದಿನವೂ ಬಿಡುವಿರದೇ, ಕೋವಿಡ್‌ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕ್ಷೇತ್ರದಲ್ಲಿ 80 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಅವರೆಲ್ಲರ ಮನೆಗಳಿಗೂ ತೆರಳಿ, ಆರ್ಥಿಕ ಸಹಾಯ ನೀಡಿ ಸಾಂತ್ವನ ಹೇಳುತ್ತಿದ್ದೇನೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಬೆಡ್‌ಗಳು ಸಾಲುತ್ತಿಲ್ಲ. ಆಡಳಿತ ಪಕ್ಷದ ಶಾಸಕರಾಗಿ ಸಮಸ್ಯೆ ನಿವಾರಣೆಗೆ ಏನು ಮಾಡುತ್ತೀರಿ?

ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಬಿಟ್ಟರೆ ಒಂದೆರಡು ಚಿಕ್ಕಪುಟ್ಟ ಖಾಸಗಿ ಆಸ್ಪತ್ರೆಗಳಿವೆ. ಇದನ್ನು ಹೊರತುಪಡಿಸಿ ನೆರೆಯ ಜಿಲ್ಲೆ ರೀತಿ ಸಾಕಷ್ಟು ಖಾಸಗಿ ಆಸ್ಪತ್ರೆಗಳೂ ಇಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಿದೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನಷ್ಟು ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ವ್ಯವಸ್ಥೆ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ.

ಕ್ಷೇತ್ರದ ಜನರಿಗೆ ನಿಮ್ಮ ಸಲಹೆ ಏನು? :

ಕೋವಿಡ್‌ ಬಗ್ಗೆ ಭಯ ಗಾಬರಿ ಬೇಡ. ರೋಗ ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ವಹಿಸಬಾರದು. ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯಬಾರದು. ತಕ್ಷಣ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು. ಅಲ್ಲದೇ ಪ್ರತಿಯೊಬ್ಬರೂ ಕೋವಿಡ್‌ ನಿರೋಧಕ ಲಸಿಕೆ ಪಡೆಯಬೇಕು.

 

ಕೆ.ಎಸ್‌. ಬನಶಂಕರ ಆರಾಧ್ಯ

 

Advertisement

Udayavani is now on Telegram. Click here to join our channel and stay updated with the latest news.

Next