ಮಂಗಳೂರು: ಬೆದರಿಕೆಗೆ ಜಗ್ಗಲ್ಲ, ರಾಷ್ಟ್ರೀಯವಾದಿ, ಹಿಂದೂವಾಗಿ ಹಿಂದುತ್ವದ ಮೇಲಿನ ಚಿಂತನೆಯಿಂದ ನನಗೆ ವಿದೇಶದಿಂದ ನಿರಂತರ ಬೆದರಿಕೆ ಕರೆ ಬರುವಂತಾಗಿದೆ. ದೇಶದ ಬಗ್ಗೆ ಗೌರವ, ಪ್ರೀತಿ, ದೇಶ ಭಕ್ತಿ, ರಾಷ್ಟ್ರೀಯತೆಯ ಮೇಲೆ ಕೆಲಸ ಮಾಡಿದ್ದಕ್ಕೆ ದೇಶ ವಿರೋಧಿ ಶಕ್ತಿಗಳಿಂದ ಸಿಗುವ ಪ್ರತಿಫಲವಿದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದರು.
ಇದಕ್ಕೆ ಬೆದರಿ ಸುಮ್ಮನಾಗುವ ಜಯಾಮಾನ ನನ್ನದಲ್ಲ. ರಾಷ್ಟ್ರೀಯತೆ ನನ್ನ ದೇಶ ಎಂದು ಗೌರವಿಸುವ ಎಲ್ಲಾ ಜಾತಿ, ವರ್ಗಗಳ ಜನ ನನ್ನನ್ನು ಆಶೀರ್ವದಿಸಿ ಶಾಸಕನನ್ನಾಗಿ ಆರಿಸಿದ್ದು, ಇದೀಗ ಚುನಾವಣೆ ಹತ್ತಿರ ಬಂದಾಗ ನನ್ನ ವಿರುದ್ದ ಅಪಪ್ರಚಾರ ಮಾಡಿ ಜಯ ಸಾಧಿಸಲು ಕಾಂಗ್ರೆಸ್ ನೆಗೆಟಿವ್ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮನಪಾ ವ್ತಾಪ್ತಿಯ ಪಾಲಿಕೆಯ ಶ್ವೇತ ಪೂಜಾರಿ ಪ್ರತಿನಿಧಿಸುವ ವಾರ್ಡ್ ನಂಬ್ರ 2 ರಲ್ಲಿ 3.47 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ತಿಂಗಳ ಅಂತ್ಯಕ್ಕೆ ನನ್ನ ಕ್ಷೇತ್ರದಲ್ಲಿ ಒಟ್ಟು 2 ಸಾವಿರ ಕೋ ರೂ. ಬಜೆಟ್ ಗುರಿ ಮುಟ್ಟಲಿದೆ. ಈ ಮೂಲಕ ಹಿಂದೆಂದೂ ಈ ಕ್ಷೇತ್ರಕ್ಕೆ ಇಷ್ಟು ಅನುದಾನ ತಂದ ಉದಾಹರಣೆ ಇಲ್ಲ. ಈ ಅಭಿವೃದ್ಧಿ ಅನುದಾನದ ಬಗ್ಗೆ ಯಾವುದೇ ಚರ್ಚೆಗೂ ಸಿದ್ದ ಎಂದು ಹೇಳಿದರು.
Related Articles
ಬಿಜೆಪಿ ಪಕ್ಷದಲ್ಲಿ ತತ್ವ, ಸಿದ್ಧಾಂತ, ಕಾರ್ಯಕರ್ತರ ಪ್ರೇರಣಾ ಶಕ್ತಿಗಳಾಗಿದ್ದು, ನನ್ನ ಕ್ಷೇತ್ರದ ಪ್ರತಿ ಬೂತ್ ಪ್ರಮುಖರ, ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಅವರು ಸೂಚಿಸಿದ ಕೆಲಸ ಕಾರ್ಯಗಳಿಗೆ ಅನುದಾನ ಒದಗಿಸಿದ್ದೇನೆ. ನನ್ನ ಕ್ಷೇತ್ರದ ಪಾಲಿಕೆಯ ಎಲ್ಲಾ ವಾರ್ಡ್‍ಗಳಿಗೂ ಅನುದಾನ ಹಂಚಲಾಗಿದೆ. ಒಳರಸ್ತೆ, ಗ್ರಾಮಾಂತರ ರಸ್ತೆ, ಹಾಗೂ ಜಲಸಿರಿ, ಜಲಜೀವನ್ ಮಿಷನ್ ಸಹಿತ ಎಲ್ಲಾ ಕಾಮಗಾರಿಗಳಿಗೂ ಆದ್ಯತೆ ನೀಡಿ ಕೆಲಸ ಮಾಡಿದ್ದೇವೆ. ಬಹುತೇಕ ಕೆಲಸಗಳು ಭರದಿಂದ ನಡೆಯುತ್ತಿದ್ದು, ಹಲವಾರು ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಅಭಿವೃದ್ಧಿ ಕಾರ್ಯ ಸಹಜ, ಇಚ್ಚಾ ಶಕ್ತಿಯಿದ್ದರೆ ಅನುದಾನ ತರಬಹುದು. ಬಡ ವರ್ಗಕ್ಕೆ 6 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ಒದಗಿಸಿ ಸ್ವಂತ ಸೂರು ಒದಗಿಸಲು ಶ್ರಮ ವಹಿಸಿದ್ದೇನೆ. ಇಂತಹ ಭಾವನಾತ್ಮಕವಾಗಿ ಸ್ಪಂದನೆಯ ಕೆಲಸ ಹೆಚ್ಚು ತೃಪ್ತಿ ಕೊಡುತ್ತದೆ ಎಂದರು.
ಸ್ಥಳೀಯ ಪಾಲಿಕೆ ಸದಸ್ಯೆ ಶ್ವೇತ ಪೂಜಾರಿ ಮಾತನಾಡಿ, ಡಾ. ಭರತ್ ಶೆಟ್ಟಿ ವೈ. ಅವರು ಶಾಸಕರಾಗಿ ಬಂದ ಬಳಿಕ ಮಾಡಿದ ಅಭಿವೃದ್ಧಿ ಕಾರ್ಯ ಕಣ್ಣ ಮುಂದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಅಪಪ್ರಚಾರವನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದರು.
ಸ್ಥಳೀಯ ಕೆಲಸವಿರಲಿ, ಇಲ್ಲವೇ ಈ ಹಿಂದಿನ ಕಾಂಗ್ರೆಸ್ ಪಕ್ಷ ತಂದು ಸುಲಿಗೆ ಮಾಡಲು ಹಾಕಿದ ಟೋಲ್ ಗೇಟ್ ಇರಲಿ, ಯಾವುದೇ ಪ್ರಚಾರವಿಲ್ಲದೆ ತೆಗೆದು ಹಾಕಿದ ಕೆಲಸ ಶಾಸಕರಿಗೆ, ಸಂಸದರಿಗೆ ಸಲ್ಲುತ್ತದೆ. ಪ್ರತಿಭಟನೆ ಮಾಡುವವರಿಗೂ ಇದು ತಿಳಿದಿದ್ದರೂ ತಮ್ಮ ಸಾಧನೆ ಎಂದು ಬಿಂಬಿಸಲು ಮಾಡಿದ್ದಾರೆ ಎಂದು ವ್ಯಂಗ್ಯ ವಾಡಿದರು.
ಸಮಾರಂಭದಲ್ಲಿ ಶಾಸಕರನ್ನು ಹಾಗೂ ಮನಪಾ ಸದಸ್ಯರನ್ನು ವಿವಿಧ ಬೂತ್‍ಗಳ ಪ್ರತಿನಿಧಿಗಳು ಸಮ್ಮಾನಿಸಿದರು. ವೇದಿಕೆಯಲ್ಲಿ ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗಣೇಶ್ ಐತಾಳ್, ಆಡಳಿತ ಸಮಿತಿಯ ರವಿರಾಜ್ ಸುವರ್ಣ, ದೇವೇಂದ್ರ ಪೂಜಾರಿ, ಬಿಜೆಪಿ ಪ್ರಮುಖರಾದ ಮಹೇಶ್ ಮೂರ್ತಿ ಸುರತ್ಕಲ್, ಪಾಲಿಕೆ ಸದಸ್ಯೆ ಶೋಭಾ ರಾಜೇಶ್ ಹಾಗೂ ವಿವಿಧ ಬೂತ್‍ಗಳ ಅಧ್ಯಕ್ಷರು, ಪ್ರಮುಖರು, ಸಹ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಂತೋಷ್ ಎನ್‍ಐಟಿಕೆ ಸ್ವಾಗತಿಸಿದರು. ಪುಷ್ಪರಾಜ್ ಮುಕ್ಕ ನಿರೂಪಿಸಿದರು.