ಹೊನ್ನಾಳಿ: ನಾನು ಮುಖ್ಯಮಂತ್ರಿಯಾದರೆ ಅಧಿ ಕಾರ ಸ್ವೀಕಾರ ಮಾಡಿದ ಐದೇ ನಿಮಿಷದಲ್ಲಿ ಎಲ್ಲ ಸಮಾಜಕ್ಕೂ ಮೀಸಲಾತಿ ಘೋಷಣೆ ಮಾಡುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ತಾಲೂಕು ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಶರಣು ಶರಣಾರ್ಥಿ ಸಂದೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಕೆಲ ಜಿಲ್ಲೆಗಳಲ್ಲಿ ಮಾತ್ರ ಪಂಚಮಸಾಲಿ ಸಮುದಾಯದ ಉಳ್ಳವರಿದ್ದು ಬಹಳಷ್ಟು ಜನ ಇಂದಿಗೂ ಬಡತನದಲ್ಲೇ ಬದುಕುತ್ತಿದ್ದಾರೆ. ಅಂತವರಿಗೆ 2ಎ ಮೀಸಲಾತಿ ಅವಶ್ಯವಿದೆ. ಸಿಎಂ ಬಿಎಸ್‌ವೈ ಮುಂದಿನ 6 ತಿಂಗಳ ನಂತರ ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಮೀಸಲಾತಿ ಘೋಷಿಸದಿದ್ದರೆ ಹೋರಾಟ ಅನಿವಾರ್ಯ. ರಾಜ್ಯದಲ್ಲಿ ವಿವಿಧ ಸಮುದಾಯದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು. ಪ್ರಸ್ತುತ ದಿನಗಳಲ್ಲಿ ಸೂಟ್‌ಕೇಸ್‌ನಲ್ಲಿ ಕಪ್ಪ ಇಟ್ಟು ಕೊಟ್ಟವರಿಗೆ ಮಾತ್ರ ಮಂತ್ರಿಗಿರಿ ದೊರೆಯುತ್ತಿದೆ. ನಾನು ಮಂತ್ರಿ ಪದವಿ ಪಡೆಯಲು ಯಾರ ಮನೆ ಬಾಗಿಲನ್ನೂ ತಟ್ಟುವುದಿಲ್ಲ. 1994ರಿಂದ ಜನರ ಮಧ್ಯೆ ಇದ್ದು ರಾಜಕೀಯ ಮಾಡಿದ್ದೇನೆ. ಎರಡು ಬಾರಿ ಶಾಸಕ, ಒಂದು ಬಾರಿ ವಿಧಾನ ಪರಿತ್ ಸದಸ್ಯ ಹಾಗೂ ಒಂದು ಬಾರಿ ಸಂಸದನಾಗಿ, ಕೇಂದ್ರ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಅಧಿಕಾರವನ್ನು ಬೆನ್ನತ್ತಿಕೊಂಡು ಹೋಗುವ ಜಾಯಮಾನ ನನ್ನದಲ್ಲ ಎಂದರು.
ವಿಜಯಪುರ ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಅಂತಹ ಕ್ಷೇತ್ರದಲ್ಲಿ ನಾನು ಗೆದ್ದು ಬರುತ್ತೇನೆ. ನನ್ನ ಒಲವು ದೇಶ ಪ್ರೇಮಿಗಳ ಪರವಾಗಿ ಇರುತ್ತದೆ. ದೇಶದ ಬಗ್ಗೆ ಗೌರವ ತೋರಿಸದ ಜನರ ಪರ ಇರುವುದಿಲ್ಲ ಎಂದು ಹೇಳಿದರು. ಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಿಎಂ ಬಿಎಸ್‌ವೈ ಮೀಸಲಾತಿ ಪರ ಇದ್ದು, 6 ತಿಂಗಳು ಅವಧಿ ಕೇಳಿಕೊಂಡಿದ್ದಾರೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎನ್ನುವುದು ನನ್ನ ವಾದ ಎಂದರು.
ಮಾಜಿ ಶಾಸಕ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಿಎಂ ಯಡಿಯೂರಪ್ಪ 6 ತಿಂಗಳಲ್ಲಿ ಮೀಸಲಾತಿ ಘೋಷಣೆ ಮಾಡದಿದ್ದರೆ ಪ್ರತಿ ತಾಲೂಕುಗಳಲ್ಲಿ ಕ್ಷೇತ್ರದ ಶಾಸಕರ ಮನೆ ಮುಂದೆ ಸಮಾಜ ಬಾಂಧವರು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಕನಿಷ್ಟ ನಾಲ್ಕು ಜನ ಸಮಾಜದ ಶಾಸಕರು ಆಯ್ಕೆಯಾಗಬೇಕು ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ರಾಣಿಬೆನ್ನೂರು ನಗರದ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಮಾತನಾಡಿದರು. ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಎನ್.ಡಿ. ಪಂಚಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರು ಉಪಸ್ಥಿತರಿದ್ದರು. ಪಟ್ಟಣ ಶೆಟ್ಟಿ ಪರಮೇಶ್ವರಪ್ಪ ಸ್ವಾಗತಿಸಿದರು. ಶಿಕ್ಷಕ ಕೆ.ವಿ.ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು.