ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರ ಪರ ಕ್ಷೇತ್ರದಾದ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿ ಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೃತಜ್ಞತೆ ಸಲ್ಲಿಸಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಮೂಡಲಗಿಗೆ ಏ-14ರಂದು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಇಡೀ ದಿನ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ. ಮುಖ್ಯಮಂತ್ರಿಗಳು ಸಹ ತಮ್ಮೊಂದಿಗೆ ಪ್ರಾಥಮಿಕ ಹಂತದಲ್ಲಿ ಯಾರೂ ಸಂಪರ್ಕವಿದ್ದರೋ ಅವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿರಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಏ.18 ರಿಂದ 5 ದಿನಗಳವರೆಗೆ ಹೋಂ ಕ್ವಾರಂಟೈನ್‌ಗೆ ಒಳಗಾಗಲಿದ್ದೇನೆ. ನನಗೆ ಯಾವುದೇ ತರಹ ರೋಗ ಲಕ್ಷಣಗಳಿಲ್ಲದಿದ್ದರೂ ಸಿಎಂ ಹಾಗೂ ವೈದ್ಯರ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಂಡಿದ್ದೇನೆಂದು ಅವರು ಹೇಳಿದ್ದಾರೆ.
ನಾಳೆಯಿಂದಲೇ ಕ್ಷೇತ್ರದ ಕಾರ್ಯಕರ್ತರನ್ನು ಭೇಟಿ ಮಾಡಬೇಕೆಂಬುದು ನನ್ನ ಆಶಯವಾಗಿತ್ತು. ಅನಿವಾರ್ಯವಾಗಿ ಹೋಂ ಕ್ವಾರಂಟೈನ್‌ಗೆ ಒಳಗಾಗುತ್ತಿರುವುದರಿಂದ ಯಾರೂ ತಪ್ಪು ತಿಳಿದುಕೊಳ್ಳಬಾರದು. ನನ್ನ ಅನುಪಸ್ಥಿತಿಯಲ್ಲಿ ನಮ್ಮ ಟೀಂ ಎನ್‌ಎಸ್ ಎಫ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವವರು ಸ್ಪಂದಿಸುತ್ತಾರೆ. ಬರುವ ಶುಕ್ರವಾರದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು-ಕೊರತೆ ವಿಚಾರಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.