Advertisement

ವಿದ್ಯಾರ್ಥಿನಿ ದೀಕ್ಷಾಳ ಮನೆಗೆ ಶಾಸಕ, ಬಿಇಓ ಭೇಟಿ: ಹೊಸ ಮನೆ ನಿರ್ಮಾಣದ ಭರವಸೆ

12:04 PM Jun 30, 2021 | Team Udayavani |

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗ ನಿವಾಸಿ, ಮಂಗಳೂರು ದಕ್ಷಿಣದ ಮುತ್ತೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿರುವ ದೀಕ್ಷಾ ಶೆಟ್ಟಿ ಅವರ ಮನೆ ಕುಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಂಗಳವಾರ ಪುತ್ತೂರು ಶಾಸಕ ಸಂಜೀವ ಮಠಂದೂರು, ಕ್ಷೇತ್ರ ಶಿಕ್ಷಣಾಕಾರಿ ಲೋಕೇಶ್ ಸಹಿತ ಹಲವರು ಭೇಟಿ ನೀಡಿ ಸಮಸ್ಯೆ ಆಲಿಸಿ ಧೈರ್ಯ ತುಂಬಿದರು.

Advertisement

ವಿದ್ಯಾರ್ಥಿನಿ ತಂದೆ, ತಾಯಿ, ಸಹೋದರ ವಾಸವಾಗಿದ್ದ ಮನೆಯು ಮಳೆ ಕಾರಣದಿಂದ ಜೂ.28ರಂದು ಕುಸಿದಿತ್ತು. ಇಂಥ ಪರಿಸ್ಥಿತಿಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧವಾಗುವುದು ಹೇಗೆ ಎಂಬ ಅವಳ ಆತಂಕವನ್ನು ಮಂಗಳವಾರ ಉದಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.

ಸೋಮವಾರವೇ ಬನ್ನೂರು ಗ್ರಾ.ಪಂ. ಅಧ್ಯಕ್ಷೆ ಜಯ ರಮೇಶ್ ಅವರ ನೇತೃತ್ವದಲ್ಲಿ ಈ ಕುಟುಂಬವನ್ನು ಗ್ರಾ.ಪಂ. ಸಭಾಭವನ ಕಟ್ಟಡಕ್ಕೆ ಸ್ಥಳಾಂತರಿಸಿ ಆಸರೆ ನೀಡಲಾಗಿದೆ. ಶಾಸಕ ಸಂಜೀವ ಮಠಂದೂರು ಮನೆಯವರ ಸಮಸ್ಯೆ ಆಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ದಾಖಲೆಪತ್ರಗಳ ಇಲ್ಲದೆ ಈ ಕುಟುಂಬಕ್ಕೆ ಸರಕಾರದ ಸವಲತ್ತು ಸಿಗುತಿಲ್ಲ. ಪಕ್ಷದ ಹಾಗೂ ಸಮಾಜದ ಸಹಕಾರದಿಂದ ಹೊಸ ಮನೆ ನಿರ್ಮಿಸಿಕೊಡಲಾಗುವುದು. ಅಲ್ಲಿಯ ತನಕ ಗ್ರಾ.ಪಂ.ಮೂಲಕ ವಾಸಕ್ಕೆ ತಾತ್ಕಾಲಿಕ ಮನೆ ವ್ಯವಸ್ಥೆ ಹಾಗೂ ಅಗತ್ಯ ಆಹಾರದ ವ್ಯವಸ್ಥೆ ಒದಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

ಪುತ್ತೂರಿನಲ್ಲಿ ಪರೀಕ್ಷೆಗೆ ಅವಕಾಶ:

Advertisement

ವಿದ್ಯಾರ್ಥಿನಿ ಬಯಸಿದರೆ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಪುತ್ತೂರು ಬಿಇಓ ತಿಳಿಸಿದರು. ಸದ್ಯ ಆಕೆ ತಾನು ಕುಪ್ಪೆಪದವಿನ ಸಂಬಂಧಿಕರ ಮನೆಯಿಂದ ಶಾಲೆಗೆ ತೆರಳುತ್ತಿದ್ದು ಬುಧವಾರ ಅಲ್ಲಿಗೆ ತೆರಳಿ ಅಲ್ಲೇ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾಳೆ ಎಂದು ಬಿಇಓ ಲೋಕೇಶ್ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಸಹೋದರ ಕೊಂಬೆಟ್ಟು ಪ್ರೌಢಶಾಲೆಗೆ ದಾಖಲು :

ಆಕೆಯ ಸಹೋದರ ವಿಕಾಸ್ ಸ್ಥಳೀಯ ಶಾಲೆಯೊಂದರಲ್ಲಿ 7 ನೇ ತರಗತಿ ಪೂರ್ಣಗೊಳಿಸಿದ್ದಾನೆ. 8 ನೇ ತರಗತಿಗೆ ಪುತ್ತೂರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ದಾಖಲಿಸುವಂತೆ ಸಿಆರ್ಪಿಗೆ ಸೂಚಿಸಿದ ಬಿಇಓ ಲೋಕೇಶ್ ಅವರು ಬುಧವಾರವೇ ದಾಖಲಾತಿ ಮಾಡುವಂತೆ ನಿರ್ದೇಶಿಸಿದರು.

ವಿವಿಧ ಸಂಘಟನೆಗಳ ಭರವಸೆ:

ಕುಸಿದ ಮನೆ ಪುನರ್ ನಿರ್ಮಾಣಕ್ಕೆ ಪುತ್ತೂರು ಬಂಟರ ಸಂಘವು ನೆರವು ನೀಡುವ ಭರವಸೆ ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಅಭಿಮಾನಿ ಬಳಗವು ಈ ಕುಟುಂಬಕ್ಕೆ ದರ್ಬೆಯಲ್ಲಿ ತಾತ್ಕಾಲಿಕ ಮನೆ ಒದಗಿಸುವ ಜತೆಗೆ ಮುಂಬರುವ ದಿನಗಳಲ್ಲಿ ಹೊಸ ಮನೆ ನಿರ್ಮಿಸಿ ಕೊಡುವ ಆಶ್ವಾಸನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next