ಬೆಂಗಳೂರು: ಆಪರೇಷನ್ ಕಮಲಕ್ಕೆ ಹೆದರಿ ರೆಸಾರ್ಟ್‌ಗೆ ತೆರಳಿ ಗಲಾಟೆ ಮಾಡಿಕೊಂಡಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಆರೋಗ್ಯದಲ್ಲಿ ಅಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಆದರೆ, ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಈ ನಡುವೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರು ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆನಂದ್ ಸಿಂಗ್ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್, ಈ ರೀತಿಯ ಘಟನೆ ನಡೆದಿರುವುದು ದುರ್ದೈವ.
ಈ ಪ್ರಕರಣದಿಂದ ತುಂಬಾ ನೋವಾಗಿದೆ. ಪಕ್ಷಕ್ಕೂ ಈ ಘಟನೆ ಬೇಸರ ತರಿಸಿದೆ ಎಂದು ಹೇಳಿದರು. ಆನಂದ್ ಸಿಂಗ್ ಸ್ವಲ್ಪ ಮಟ್ಟಿಗೆ ಹುಷಾರಾಗಿದ್ದಾರೆ. ಒಂದು ಕಣ್ಣಿಗೆ ಸ್ವಲ್ಪ ಗಾಯವಾಗಿದೆ. ಇನ್ನೊಂದು ಕಣ್ಣನ್ನು ತೆರೆದು ನೋಡುತ್ತಿದ್ದಾರೆ. ನೋವು ಕಡಿಮೆಯಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಸಂಧಾನಕ್ಕೆ ಸಿದ್ಧ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಕೂಡ ಆಸ್ಪತ್ರೆಗೆ ಭೇಟಿ ಮಾಡಿ ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. ನಂತರ, ಸುದ್ದಿಗಾರರ ಜತೆ ಮಾತನಾಡಿ, ಆನಂದ್ ಸಿಂಗ್ ಆರೋಗ್ಯ ಚೆನ್ನಾಗಿದೆ. ಅವರೇ ಎದ್ದು ನಡೆದಾಡಿದ್ದಾರೆ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಹೇಳಿದರು.
ಆನಂದ್ ಸಿಂಗ್ ಜೊತೆಗೆ ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ. ಕಂಪ್ಲಿ ಶಾಸಕ ಗಣೇಶ್ ಈಗಾಗಲೇ ಕ್ಷಮೆ ಕೋರಿದ್ದಾರೆ. ನಿನ್ನೆ ಎರಡು ಬಾರಿ ಗಣೇಶ್ ಜೊತೆ ಮಾತುಕತೆ ನಡೆಸಿದ್ದೇನೆ. ಅವರೂ ತಪ್ಪಾಗಿದೆ ಎಂದು ಹೇಳಿದ್ದಾರೆ. ಆನಂದ್ ಸಿಂಗ್ ಒಪ್ಪಿಕೊಂಡರೆ ಗಣೇಶ್ ಅವರನ್ನು ಕರೆದುಕೊಂಡು ಬಂದು ಭೇಟಿ ಮಾಡಿಸಿ ಸಂಧಾನಕ್ಕೆ ಸಿದ್ಧ ಎಂದು ತಿಳಿಸಿದರು.
ಆನಂದ್ ಸಿಂಗ್ ಆರೋಗ್ಯವಾಗಿದ್ದಾರೆ. ರಾಜ್ಯ ನಾಯಕರ ಜೊತೆಗೆ ಈಗಾಗಲೇ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾತನಾಡಿದ್ದಾರೆ. ಹಲ್ಲೆ ಪ್ರಕರಣದ ಬಗ್ಗೆ ಪಕ್ಷ, ಸಮಿತಿಯೊಂದನ್ನು ರಚನೆ ಮಾಡಿದೆ. ಆ ಸಮಿತಿಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ.