ಬೆಂಗಳೂರು: ಗಲಭೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನವಾಗಿದೆ. ಇದರಿಂದ ನನಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ರಾಜ್ ಮತ್ತು ಜಾಕೀರ್ ನನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡಿದ್ದೆ. ಅವರು ಶಿಸ್ತು ಸಮಿತಿಗೆ ವಹಿಸುವ ಭರವಸೆ ನೀಡಿದ್ದರು. ಇದುವರೆಗೆ ಶಿಸ್ತು ಸಮಿತಿಗೆ ವಹಿಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಇದು ನನ್ನ ಮನೆಗೆ ಸಂಬಂಧಿಸಿದ ವಿಷಯ. ಹಾಗಾಗಿ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಶಿಸ್ತು ಸಮಿತಿ ಸ್ಪಂದಿಸದೇ ಇದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ. ನನಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ
ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಬಿಜೆಪಿ ಪಕ್ಷ ಸೇರುವ ಪ್ರಶ್ನೆಯಿಲ್ಲ. ಅರವಿಂದ ಲಿಂಬಾವಳಿ ನನಗೆ ಸಂಬಂಧಿಕರು, ಹಾಗಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಬೋವಿ ಸಮಾಜದ ಗುರುಗಳೂ ಸಹ ಬೆಂಬಲಿಸಿದ್ದಾರೆ. ಆದರೂ ನನ್ನ ತಂದೆ ಕಾಲದಿಂದ ನಾವು ಕಾಂಗ್ರೆಸ್ ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇವೆ ಎಂದು ಶ್ರೀನಿವಾಸ ಮೂರ್ತಿ ಹೇಳಿದರು.