Advertisement

ಮುಂದುವರಿದ ಅಸಮಾಧಾನ: ಗೃಹಜ್ಯೋತಿ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಶಾಸಕ ಅಜಯ ಸಿಂಗ್ ಗೈರು

01:32 PM Aug 05, 2023 | Team Udayavani |

ಕಲಬುರಗಿ: ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಜೇವರ್ಗಿ ಕ್ಷೇತ್ರದ ಶಾಸಕ ಡಾ ಅಜಯ ಸಿಂಗ್ ಶನಿವಾರ ನಗರದಲ್ಲಿ ನಡೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಅಸಮಾಧಾನ ಬಹಿರಂಗವಾಗಿ ಸ್ಪೋಟಿಸಿದ್ದಾರೆ.

Advertisement

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಅದರಲ್ಲೂ ಡಾ. ಅಜಯ ಸಿಂಗ್ ಅವರ ಮನೆಗೆ ಹತ್ತಿಕೊಂಡಂತೆ ನಡೆದಿರುವ ಗೃಹ ಜ್ಯೋತಿ ಯೋಜನೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.‌ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದು, ಮೂರನೇ ಬಾರಿಗೆ ಶಾಸಕರಾಗಿರುವ ಜೇವರ್ಗಿ ಕ್ಷೇತ್ರದ ಡಾ. ಅಜಯಸಿಂಗ್ ಮಾತ್ರ ಗೈರು ಹಾಜರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.‌

ಜಿಲ್ಲೆಯಲ್ಲಿ ಏಳು ವಿಧಾನಸಭಾ ಸದಸ್ಯರಿದ್ದು, ಅವರ ಪೈಕಿ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್ ಸಚಿವರಾಗಿದ್ದಾರೆ. ಇಬ್ಬರು ಸಚಿವರು ಹಾಗೂ ಉಳಿದ ಶಾಸಕರಾದ ಎಂ.ವೈ ಪಾಟೀಲ್, ಬಿ.ಆರ್.‌ಪಾಟೀಲ್, ಅಲ್ಲಮಪ್ರಭು ಪಾಟೀಲ್, ಖನೀಜಾ ಫಾತೀಮಾ ಸೇರಿದಂತೆ  ಜಿಲ್ಲೆಯ ಎಂಎಲ್ಸಿ ಪಾಲ್ಗೊಂಡಿದ್ದಾರೆ.

ಬೀದರ್ ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ, ರಹಿಂಖಾನ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಜಿಲ್ಲೆಯ ಶಾಸಕರಾದ ಚೆನ್ನಾರೆಡ್ಡಿ ತುನ್ನೂರ, ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಡಾ. ಚಂದ್ರಶೇಖರ ಪಾಟೀಲ್, ಅರವಿಂದ ಅರಳಿ ಸೇರಿದಂತೆ ಇತರೆಲ್ಲರೂ ಪಾಲ್ಗೊಂಡಿದ್ದಾರೆ.‌ ವಿಧಾನ ಪರಿಷತ್ ಸದಸ್ಯ ಡಾ.ಅಜಯಸಿಂಗ್ ಸಹೋದರ ವಿಜಯಸಿಂಗ್ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ ಡಾ. ಅಜಯಸಿಂಗ್ ಮಾತ್ರ ಗೈರು ಹಾಜರಾಗಿರುವುದು ಪ್ರಮುಖ ವಾಗಿ ಕಂಡು ಬಂತು.

ಇದನ್ನೂ ಓದಿ:ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾನೂ ಕೈ ಟಿಕೆಟ್ ಆಕಾಂಕ್ಷಿ: ಎಚ್. ವಿಶ್ವನಾಥ್

Advertisement

ಡಾ.‌ಅಜಯಸಿಂಗ್ ಅವರು ಸಚಿವ ಸ್ಥಾನದಿಂದ‌ ವಂಚಿತರಾದ ನಂತರ ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗ್ರೂಪ್ ದಿಂದ ಹೊರ ಹೋಗಿರುವ ನಡುವೆ ಈಗ ಪ್ರಮುಖವಾಗಿ ನಡೆದಿರುವ ಕಾರ್ಯಕ್ರಮದಿಂದ ದೂರ ಉಳಿದಿರುವುದು ನಿಜಕ್ಕೂ ಹಲವು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.‌

ಅದಲ್ಲದೇ ಈಚೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಲಬುರಗಿ ಅಭಿವೃದ್ದಿ ಬಂಧರ ಅಧಿಕಾರಿಗಳ ಸಭೆಗೆ ಶಾಸಕರನ್ನು ಆಹ್ವಾನಿಸದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.‌ ಇದರ ನಡುವೆ ಜಿಲ್ಲೆಯ ಮತ್ತೋರ್ವ ಶಾಸಕ ಬಿ.ಆರ್. ಪಾಟೀಲ್ ಶಾಸಕಾಂಗ ಸಭೆ ಕರೆಯುವಂತೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಸಂಚಲನ ಮೂಡಿಸಿರುವ ನಡುವೆ ಈಗ ಶಾಸಕ ಡಾ. ಅಜಯಸಿಂಗ್ ಗೈರು ಹಾಜರಾಗಿರುವುದು ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಅವಕಾಶ ಮಾಡಿ‌ಕೊಟ್ಟಿದೆ ಎಂದರೆ ತಪ್ಪಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next