Advertisement

ಶಾಸಕ ಅಭಯಚಂದ್ರ ಕಾರು ಮಹಿಳೆಗೆ ಢಿಕ್ಕಿ: ದೂರು 

08:55 AM Jul 23, 2017 | Team Udayavani |

ಬಜಪೆ: ಬಜಪೆ ಕಿನ್ನಿಪದವಿನ ಪೆಟ್ರೋಲ್‌ ಬಂಕ್‌ ಬಳಿ ಮಹಿಳೆಯೊಬ್ಬರಿಗೆ ಮೂಡಬಿದಿರೆ ಶಾಸಕ ಅಭಯಚಂದ್ರ ಅವರು ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಸಾವರಿಸಿಕೊಂಡು ಪ್ರಶ್ನಿಸಲು ಬಂದ ಮಹಿಳೆಯನ್ನು ಶಾಸಕರು ತಳ್ಳಿದ ಕಾರಣ ಆಕೆ ಮತ್ತೆ ಬಿದ್ದು ಪೆಟ್ಟಾಗಿದೆ ಎಂದು ಬಜಪೆ ಠಾಣೆಗೆ ಶನಿವಾರ ದೂರು ನೀಡಲಾಗಿದೆ.

Advertisement

ಬಜಪೆಯ ಜೈನಾಬಿ (48) ಗಾಯಾಳು ಮಹಿಳೆ. ಅವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿ ದ್ದಾರೆ. ಶುಕ್ರವಾರ ಸಂಜೆ ಅಭಯ ಚಂದ್ರ ಮಂಗಳೂರಿನಿಂದ ಬಜಪೆ ಮಾರ್ಗವಾಗಿ ಮೂಡಬಿದಿರೆ ಕಡೆಗೆ ಬರುತ್ತಿದ್ದಾಗ ಬಜಪೆ ಕಿನ್ನಿಪದವಿನಲ್ಲಿ ಅಪಘಾತ ಸಂಭವಿಸಿದೆ.

ಬಜಪೆ ಪೊಲೀಸರು ಕಾರಿನ ಶಾಸಕರ ಚಾಲಕ  ಸುದರ್ಶನ್‌ ಕೆ. ಕಿತ್ತೂರು ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌ 279 (ಅತೀ ವೇಗ ಚಾಲನೆ), ಸೆಕ್ಷನ್‌ 337 (ಗಾಯ), ಸೆಕ್ಷನ್‌ 323 (ಮಹಿಳೆಯನ್ನು ತಳ್ಳಿದ) ಪ್ರಕರಣ ದಾಖಲಾಗಿದೆ. ಚಾಲಕನನ್ನು, ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಶಾಸಕರ ಮೇಲೆ ಕ್ರಮ ಜರಗಿಸಲು ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು “ಉದಯವಾಣಿ’ ಪ್ರತಿನಿಧಿ ಶಾಸಕ ಅಭಯಚಂದ್ರ ಅವರನ್ನು  ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.

ಎದ್ದು ನಿಂತಾಕೆಯನ್ನು ತಳ್ಳಿದರು
ಕಾರು ತಾಗಿದಾಗ  ಮಹಿಳೆ ಆಯತಪ್ಪಿ ಬಿದ್ದರು; ತತ್‌ಕ್ಷಣ ಸಾವರಿಸಿಕೊಂಡು ಕಾರಿನ ಬಾಗಿಲ ಹಿಡಿಯನ್ನು ಹಿಡಿದು ಮೇಲೆದ್ದು, “ನೋಡಲಿಕ್ಕಿಲ್ಲವಾ ಸೀದಾ ಹೋಗುವುದಾ’ ಎಂದು ಶಾಸಕರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಆಗ ಶಾಸಕರು ಮಹಿಳೆಯ ಕೈಯನ್ನು ಕಾರಿನ ಬಾಗಿಲ ಹಿಡಿಯಿಂದ ಬಿಡಿಸಿ, ತಳ್ಳಿದ್ದು, ಅವರು ಮತ್ತೆ ಕೆಳಗೆ ಬಿದ್ದಿದ್ದಾರೆ ಎಂದು ಜೈನಾಬಿಯ ಸಂಬಂಧಿಕರು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ  ದೂರು ನೀಡುವುದಾಗಿ  ಹೇಳಿದಾಗ “ನೀನು ಯಾರಲ್ಲಿ ಬೇಕಾದರೆ ಹೇಳು’ ಎಂದು  ಸೌಜನ್ಯ ತೋರದೆ, ಅಮಾನವೀಯವಾಗಿ ವರ್ತಿಸಿರುವುದಾಗಿ ಮಹಿಳೆ ದೂರಿನಲ್ಲಿ  ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next