ಮುದ್ದೇಬಿಹಾಳ: ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿಗಳ ಪರ ಪ್ರಚಾರ ಮಾಡಲು ಪಕ್ಷದ ವರಿಷ್ಠರು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕರೂ ಅಗಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅದ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರನ್ನು ಗೋವಾಕ್ಕೆ ಕರೆಸಿಕೊಂಡಿದ್ದಾರೆ.
ಪಕ್ಷದ ವರಿಷ್ಠರ ಸೂಚನೆಯಂತೆ ಶಾಸಕರು ಗೋವಾಕ್ಕೆ ತೆರಳಿ ಮಾಫುಸಾದಲ್ಲಿ ಭಾಜಪಾ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷಜೀ ರವರನ್ನು ಭೇಟಿಯಾಗಿ ನಂತರ ಚುನಾವಾಣ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾರೆ.
ಶಾಸಕ ನಡಹಳ್ಳಿಯವರೊಂದಿಗೆ ಇಲ್ಲಿನ ಬಿಜೆಪಿ ಮುಖಂಡರಾಗಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಯುವ ಮುಖಂಡರು ಹಾಗೂ ಆರ್ ಎಸ್ ಎಸ್ ಮೂಲದವರಾಗಿರುವ ಸಿದ್ದರಾಜ ಹೊಳಿ, ರಾಜೇಂದ್ರಗೌಡ ಗಾಯಗೊಂಡ, ಶಿವಶಂಕರ ಹಿರೇಮಠ ಮುಂತಾದವರ ತಂಡವೂ ತೆರಳಿ ಶಾಸಕರೊಂದಿಗೆ ಬಿಜೆಪಿ ಅಬ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಗೋವಾದ ಮಾಪುಸಾ ಭಾಗದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳ ಬಹಳಷ್ಟು ಕನ್ನಡಿಗರು ಅಲ್ಲಿ ವಾಸವಾಗಿದ್ದಾರೆ. ಇವರ ಮತಗಳು ಅಲ್ಲಿ ನಿರ್ಣಾಯಕ ಎನ್ನಿಸಿಕೊಂಡಿವೆ.
ಮೇಲಾಗಿ ಶಾಸಕ ನಡಹಳ್ಳಿಯವರು ಈ ಭಾಗದ ಕನ್ನಡಿಗರೊಂದಿಗೆ ನಿಕಟ ಸಂಪರ್ಕ ಹೊಂದಿದವರಾಗಿದ್ದಾರೆ. ಆ ದೃಷ್ಟಿಯಲ್ಲಿ ಈ ಭಾಗದ ಬಿಜೆಪಿ ಮುಖಂಡರ ತಂಡ ಪ್ರಚಾರಕ್ಕೆ ತೆರಳಿದ್ದು ಹೆಚ್ಚು ಮಹತ್ವ ಪಡೆದುಕೊಂಡಂತಾಗಿದೆ. ಅಲ್ಲಿನ ಬಿಜೆಪಿ ಮುಖಂಡರು ಶಾಸಕ ನಡಹಳ್ಳಿಯವರ ತಂಡ ಪ್ರಚಾರಕ್ಕೆ ಆಗಮಿಸಿದ್ದರಿಂದ ಬಿಜೆಪಿಗೆ ಹೆಚ್ಚಿನ ಬಲ ಬಂದಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ ತಂಡಕ್ಕೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿಕೊಂಡು ತಮ್ಮ ಹರ್ಷ ಹಂಚಿಕೊಂಡಿದ್ದಾರೆ.