Advertisement

“ಕಾಕ್‌ಟೇಲ್‌ ಲಸಿಕಾ ಪದ್ಧತಿ ಬೆಂಬಲಿಸಲ್ಲ’

09:12 PM Aug 13, 2021 | Team Udayavani |

ನವದೆಹಲಿ: ಎರಡು ಲಸಿಕೆಗಳ ಸಮ್ಮಿಶ್ರಣ (ವ್ಯಾಕ್ಸಿನ್‌ ಕಾಕ್‌ಟೇಲ್‌) ನೀಡುವ ಪರಿಕಲ್ಪನೆಯನ್ನು ತಾವು ಬೆಂಬಲಿಸುವುದಿಲ್ಲ ಎಂದು ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತಯಾರಿಸುವ “ಸೀರಂ ಇನ್‌ ಸ್ಟಿಟ್ಯೂಟ್‌ ಆಫ್ ಇಂಡಿಯಾ’ (ಎಸ್‌ಐಐ) ಮುಖ್ಯಸ್ಥ ಡಾ. ಸೈರಸ್‌ ಪೂನಾವಾಲಾ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಶುಕ್ರವಾರ, ಲೋಕಮಾನ್ಯ ತಿಲಕ್‌ ಪ್ರಶಸ್ತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ಲಸಿಕೆಗಳ ಸಮ್ಮಿಶ್ರಣದಿಂದ ಯಾವುದೇ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚದಿದ್ದರೆ, ಲಸಿಕೆಗಳ ಮಾತೃಸಂಸ್ಥೆಗಳು ಪರಸ್ಪರರ ಮೇಲೆ ಆರೋಪ ಮಾಡಿಕೊಳ್ಳಬಹುದು. ಹಾಗಾಗಿ, ಇದು ಒಳ್ಳೆಯ ಕ್ರಮವಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ” ಎಂದರು.

ಇತ್ತೀಚೆಗೆ, ಲಸಿಕೆಗಳ ಸಮ್ಮಿಶ್ರಣದಂದ ಕೋವಿಡ್‌ ನಿರೋಧಕತೆ ಅಗಾಧವಾಗಿ ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ಐಸಿಎಂಆರ್‌ನ ಅಧ್ಯಯನವೊಂದು ಹೇಳಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಭಾರತೀಯ ಕ್ರಿಕೆಟಿಗೆ ವಿದಾಯ ಹೇಳಿದ ಉನ್ಮುಕ್ತ್ ಚಂದ್‌

ಹೊಸ ಲಸಿಕೆಗೆ ಒಪ್ಪಿಗೆ: ಇದೇ ಮೊದಲ ಬಾರಿಗೆ ಭಾರತ್‌ ಬಯೋಟೆಕ್‌ ಸಂಸ್ಥೆಯ “ಮೂಗಿನ ಮೂಲಕ ಹಾಕಬಹುದಾದ ಕೋವಿಡ್‌ ಲಸಿಕೆ’ಯ ಫೇಸ್‌ 2 ಮತ್ತು ಫೇಸ್‌ 3 ಪ್ರಯೋಗಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

Advertisement

ಗುಣಮುಖರ ಸಂಖ್ಯೆ ಶೇ. 97ಕ್ಕೆ
ಬುಧವಾರ-ಗುರುವಾರ ನಡುವಿನ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 40,120 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ, ದೇಶದಲ್ಲಿ ಕೋವಿಡ್‌ ಪೀಡಿತರ ಒಟ್ಟು ಸಂಖ್ಯೆ 3,21,17,826ಕ್ಕೇರಿದೆ. ಇನ್ನು, ಗುಣಮುಖರಾಗುತ್ತಿರುವರ ಪ್ರಮಾಣ ಶೇ. 97.46ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ, ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ವೈರಾಣುವಿನ ಡೆಲ್ಟಾ ಪ್ಲಸ್‌ ರೂಪಾಂತರಿಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

ಪ್ರೊಟೀನ್‌ ಆಧಾರಿತ ಹೊಸ ಲಸಿಕೆ
ನೋಡಲು ಕೋವಿಡ್‌ ವೈರಾಣುವಿನಂತೆಯೇ ಕಾಣುವ ಪ್ರತಿಕಾಯಗಳನ್ನು ಹೊಂದಿರುವ ಕೋವಿಡ್‌ ಲಸಿಕೆಯೊಂದನ್ನು ಅಮೆರಿಕದ ಚಿಕಾಗೋ ವಿವಿಯ ಸಂಶೋಧಕರು ಅಭಿವೃದ್ಧಿಪಡಿಸಿರುವುದಾಗಿ “ಎಸಿಎಸ್‌ ಸೆಂಟ್ರಲ್‌ ಸೈನ್ಸ್‌’ ಎಂಬ ನಿಯತಕಾಲಿಕೆ ವರದಿ ಮಾಡಿದೆ. “ಇದೊಂದು ಪ್ರೋಟೀನ್‌ ಆಧಾರಿತ ಲಸಿಕೆಯಾಗಿದ್ದು, ಸಾಮಾನ್ಯ ಲಸಿಕೆಗಳು ನೀಡುವುದಕ್ಕಿಂತ ಹೆಚ್ಚಿನ ನಿರೋಧಕತೆ ನೀಡುತ್ತದೆ’ ಎಂದು ವರದಿಯಲ್ಲಿ ಬಣ್ಣಿಸಲಾಗಿದೆ. ಈ ನಡುವೆ, ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದ ನಂತರವೂ ರೋಗ ನಿರೋಧಕತೆ ಪ್ರಮಾಣ ಕಡಿಮೆ ಇರುವ ಅಮೆರಿಕನ್ನರಿಗೆ ಬೂಸ್ಟರ್‌ ಕೋವಿಡ್‌ ಲಸಿಕೆ ನೀಡಲು ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next