Advertisement

ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

08:54 AM Jan 09, 2019 | |

ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಜನ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಆರಂಭವಾದ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಮೊದಲ ದಿನವಾದ ಮಂಗಳವಾರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಜಿಲ್ಲಾದ್ಯಂತ ಸರ್ಕಾರಿ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ ಆಟೋಗಳ ಓಡಾಟ ಎಂದಿನಂತೆ ಇದ್ದಿದ್ದರಿಂದ ಸಾರ್ವಜನಿಕರಿಗೆ ಮುಷ್ಕರದ ಬಿಸಿ ತುಸು ಕಡಿಮೆ ತಟ್ಟಿತ್ತು. ಜತೆಗೆ ಸ್ವಂತ ವಾಹನ ಹಾಗೂ ಬೈಕ್‌ ಸಂಚಾರಕ್ಕೂ ಯಾವುದೇ ಅಡಚಣೆ ಉಂಟಾಗದ ಕಾರಣ ಮುಷ್ಕರದ ಮೊದಲ ದಿನ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಮುಂಜಾಗೃತಾ ಕ್ರಮವಾಗಿ ಸೋಮವಾರವೇ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.

ಬುಧವಾರವೂ ಮುಷ್ಕರ ಮುಂದುವರಿಯಲಿದೆ. ಮುಷ್ಕರದ ಭಾಗವಾಗಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ ಸ್ಥಾಪನೆಗೆ ಒತ್ತಾಯಿಸಿ ನಗರದ ರೈಲ್ವೆ ನಿಲ್ದಾಣದ ಎದುರು ಧರಣಿ ನಡೆಸಲು ಸಂಘಟನೆಗಳು ನಿರ್ಧರಿಸಿವೆ.

ಹಲವು ಸಂಘಟನೆಗಳು ಭಾಗಿ: ಎರಡು ದಿನಗಳ ಮುಷ್ಕರದಲ್ಲಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌, ಕರ್ನಾಟಕ ಪ್ರಾಂತ ರೈತ ಸಂಘ, ಭಾರತ ಕಮ್ಯುನಿಸ್ಟ್‌ ಪಕ್ಷ, ಅಖೀಲ ಭಾರತ ಕಿಸಾನ್‌ ಸಭಾ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಸಂಘ, ಅಂಚೆ ನೌಕರರ ಸಂಘ, ಔಷಧಿ ವಿತರಕರು ಮತ್ತು ಮಾರಾಟಗಾರ ಸಂಘ, ಅಂಗನವಾಡಿ, ಆಶಾ ಕಾರ್ಯಕರ್ತರ ಸಂಘ, ಬಿಸಿಯೂಟ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳು ಪಾಲ್ಗೊಂಡಿವೆ.

ಪ್ರತಿಭಟನಾ ಮೆರವಣಿಗೆ: ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಗಳನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಬಸ್‌ ನಿಲ್ದಾಣದಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಮಾರ್ಗವಾಗಿ ಒಂದು ಪ್ರತಿಭಟನಾ ಮೆರವಣಿಗೆ ಹಾಗೂ ಗಂಜ್‌ ಪ್ರದೇಶದಿಂದ ಸೂಪರ್‌ ಮಾರ್ಕೆಟ್, ಜಗತ್‌ ವೃತ್ತ ಮಾರ್ಗವಾಗಿ ಮತ್ತೂಂದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಈ ನಡುವೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಸಾರ್ವಜನಿಕ ಪಡಿತರ ವ್ಯವಸ್ಥೆ ಸಾರ್ವತ್ರೀಕರಣಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆ ಹಾಕಬೇಕು ಹಾಗೂ ಕಾಳಸಂತೆ ವ್ಯಾಪಾರ ನಿಷೇಧಿಸಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಉದ್ಯೋಗ ಸೃಷ್ಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕ ಕಾನೂನುಗಳನ್ನು ಕಾರ್ಪೋರೆಟ್ ಪರ ತಿದ್ದುಪಡಿ ಕೈಬಿಡಬೇಕು. ದೇಶದ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿ 18 ಸಾವಿರ ರೂ. ಕನಿಷ್ಟ ವೇತನ ನಿಗದಿ ಪಡಿಸಬೇಕು ಹಾಗೂ ತಿಂಗಳಿಗೆ ಆರು ಸಾವಿರ ರೂ. ಪಿಂಚಣಿ ನೀಡಬೇಕೆಂದು ಒತ್ತಾಯಿಸಿದರು.

ಮಿನಿ ವಿಧಾನಸೌಧ ಎದುರು ರಸ್ತೆ ತಡೆ: ಎರಡು ಕಡೆಗಳಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಮಿನಿ ವಿಧಾನಸೌಧ ಎದುರು ಜಮಾವಣೆಗೊಂಡರು. ಕೆಲ ಹೊತ್ತು ರಸ್ತೆ ತಡೆ ನಡೆಸಿ ರಸ್ತೆ ಮಧ್ಯೆಯೇ ಧರಣಿ ಕುಳಿತುಕೊಂಡಿದ್ದರು. ಇದರಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ ಹಾಗೂ ಜಗತ್‌ ವೃತ್ತ ಮಾರ್ಗ ಮಧ್ಯೆ ಸಂಚಾರ ಸ್ಥಗಿತಗೊಂಡಿತ್ತು. ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಮಾಜಿ ಸಚಿವ ಎಸ್‌.ಕೆ. ಕಾಂತಾ, ಮುಖಂಡರಾದ ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ ರಾಘವೇಂದ್ರ ದೇಸಾಯಿ, ಅಷ್ಪಾಕ್‌, ಎಸ್‌.ಎಂ. ಶರ್ಮಾ ಹಾಗೂ ಇತರರು ಪಾಲ್ಗೊಂಡಿದ್ದರು.

ಬೈಕ್‌ ರ್ಯಾಲಿ: ಕೆಲ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ್ಯಾಲಿ ನಡೆಸಿದರು. ಇತ್ತ, ನಗರದ ಅಂಚೆ ವಿಭಾಗೀಯ ಕಾರ್ಯಾಲಯದ ಮುಂದೆ ಅಂಚೆ ನೌಕರರ ಸಂಘಗಳ ವಿಭಾಗೀಯ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ನೂರಾರು ಅಂಚೆ ನೌಕರರು ಪ್ರತಿಭಟನೆ ನಡೆಸಿದರು.

ಪಿಕೆಜಿಬಿ ನೌಕರರ ಧರಣಿ: ಮುಷ್ಕರದ ಭಾಗವಾಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಸಂಘದ ವತಿಯಿಂದ ನಗರದ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರುಗಡೆ 100ಕ್ಕೂ ಹೆಚ್ಚು ನೌಕರರು ಧರಣಿ ನಡೆಸಿದರು. ಜಿಲ್ಲೆಯ 60 ಬ್ಯಾಂಕ್‌ ಶಾಖೆಗಳ ನೌಕರರು ಧರಣಿಯಲ್ಲಿ ಪಾಲ್ಗೊಂಡು ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಸಮಾನ ಪಿಂಚಣಿ ಜಾರಿ ಮಾಡಬೇಕು. ಗ್ರಾಮೀಣ ಬ್ಯಾಂಕ್‌ ಖಾಸಗೀಕರಣ ಹುನ್ನಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಅಭಿಜಿತ್‌ ರೋಣಿಹಾಳ, ರವಿ ಸೊಂಡೂರ, ಕೈಲಾಸ ಬೆಳ್ಳಿ, ಶರಣಗೌಡ ಬಿರಾದಾರ, ಪ್ರಸನ್ನ ಕುಲಕರ್ಣಿ, ಪರಮೇಶ್ವರ‌ ಪಾತಾಳೆ, ಸಿದ್ದಣ್ಣ, ಕೇಶವ ರಾಠೊಡ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ರಸ್ತೆಗಿಳಿಯದ ಬಸ್‌ಗಳು: ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಮುಷ್ಕರಕ್ಕೆ ಮೊದಲೇ ಬೆಂಬಲ ಕೊಟ್ಟಿದ್ದರಿಂದ ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆಯ ಯಾವುದೇ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹೀಗಾಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಹಾಗೂ ಜನತೆ ಇಲ್ಲದೇ ಬಿಕೋ ಎನ್ನುತ್ತಿತ್ತು. ನಗರ ಬಸ್‌ ನಿಲ್ದಾಣವೂ ಜನರಿಲ್ಲದೇ ಭಣಗುಡುತ್ತಿತ್ತು.

ಆಟೋ ಸಂಚಾರ ಸುಗಮ: ನಗರಾದ್ಯಂತ ಆಟೋಗಳ ಸಂಚಾರ ಸುಗಮವಾಗಿ ಸಾಗಿತು. ವಾಹನ ಹಾಗೂ ಬೈಕ್‌ ಸಂಚಾರಕ್ಕೆ ಯಾವುದೇ ಅಡೆ-ತಡೆ ಇರಲಿಲ್ಲ. ಬೈಕ್‌ ಸವಾರರು ದಿನನಿತ್ಯದಂತೆ ಪ್ರಯಾಣಿಸಿದರು.

ಅಂಗಡಿ ಮುಂಗಟ್ಟು ಬಂದ್‌: ಮುಷ್ಕರ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ನಗರದ ಮುಖ್ಯ ರಸ್ತೆಯಲ್ಲಿನ ಬಹುತೇಕ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೇಂದ್ರ ಬಸ್‌ ನಿಲ್ದಾಣದ ಸುತ್ತ-ಮುತ್ತ, ರೈಲ್ವೆ ನಿಲ್ದಾಣ ರಸ್ತೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್‌ ವೃತ್ತ, ಸೂಪರ್‌ ಮಾರ್ಕೆಟ್ ಸೇರಿದಂತೆ ಎಲ್ಲೆಡೆ ದೊಡ್ಡ ಅಂಗಡಿಗಳು ಬಂದ್‌ ಆಗಿದ್ದು. ಜತೆಗೆ ಕೆಲ ಶಾಪಿಂಗ್‌ ಮಾಲ್‌ಗ‌ಳು, ಹೋಟೆಲ್‌ಗ‌ಳು ಬಂದಾಗಿದ್ದವು. ರಸ್ತೆ ಬದಿಯ ಸಣ್ಣ-ಪುಟ್ಟ ಟೀ ಅಂಗಡಿಗಳು, ಪಾನ್‌ ಶಾಪ್‌ಗ್ಳು ತೆರೆದಿದ್ದವು.

ಪೊಲೀಸರ ಹದ್ದಿನ ಕಣ್ಣು: ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಪ್ರದೇಶಗಳು, ಹೊರವಲಯದ ರಿಂಗ್‌ ರಸ್ತೆಗಳು ಸೇರಿದಂತೆ ನಗರದಾದ್ಯಂತ ಎಲ್ಲೆಡೆ ಪೊಲೀಸ್‌‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಖುದ್ದು ನಗರದ ಪ್ರಮುಖ ಪ್ರದೇಶದಲ್ಲಿ ಭದ್ರತೆ ಪರಿಶೀಲನೆ ನಡೆಸಿದರು. ಪೊಲೀಸ್‌ ಅಧಿಕಾರಿಗಳಾದ ರಮೇಶ ಮೇಟಿ, ಎಸ್‌.ಎಸ್‌.ಹಿರೇಮಠ, ಜೇಮ್ಸ್‌ ಮಿನೇಜಸ್‌, ಮಹಾದೇವ ಪಂಚಮುಖೀ ಸೇರಿದಂತೆ ಪಿಎಸ್‌ಐ, ಸಿಪಿಐ, ಡಿಎಸ್‌ಪಿ ಸೇರಿದಂತೆ 80 ಅಧಿಕಾರಿಗಳು ಹಾಗೂ 1,500 ಪೊಲೀಸ್‌ ಸಿಬ್ಬಂದಿ, 300 ಹೋಮ್‌ಗಾರ್ಡ್ಸ್‌, 12 ಡಿಎಆರ್‌ ತುಕಡಿ, 3 ಕೆಎಸ್‌ಆರ್‌ಪಿ ತುಕಡಿ ಭದ್ರತೆ ನಿಯೋಜಿಸಲಾಗಿತ್ತು.

ಇಂದು ರಜೆ ಇಲ್ಲ
ಬುಧವಾರ ಜಿಲ್ಲೆಯ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ತಿಳಿಸಿದ್ದಾರೆ. ಮುಷ್ಕರವಿದ್ದರೂ ಶಾಲೆ-ಕಾಲೇಜಿಗಳಿಗೆ ರಜೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮಂಗಳವಾರ ಸಂಜೆವರೆಗೆ ಪ್ರತಿಭಟನೆ ನಡೆಸಿದ್ದು, ಬುಧವಾರ ಮತ್ತೆ ಬೆಳಗ್ಗೆ 10 ರಿಂದ ಪ್ರತಿಭಟನೆ ನಡೆಸಲಿದೆ ಎಂದು ಜಂಟಿ ಸಮಿತಿ ಮುಖಂಡ ಭೀಮಾಶಂಕರ ಮಾಡಿಯಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next