ಬೆಳ್ತಂಗಡಿ: ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಮಿತ್ತಬಾಗಿಲು ಗ್ರಾಮದ ಕಾಡುಮನೆ ಸಮೀಪ ಭಾರಿ ಭೂಕುಸಿತ ಸಂಭವಿಸಿದ್ದು ಸ್ಥಳೀಯ ನಿವಾಸಿಗಳು ಆತಂಕದಲ್ಲಿ ದಿನದೂಡುವಂತಾಗಿದೆ.
ಕಾಡುಮನೆ ಸಮೀಪದ ಆಲ್ಲದಕಾಡು ಎಂಬಲ್ಲಿ ಸುಮಾರು 4 ಎಕ್ರೆ ಭೂ ಪ್ರದೇಶ ಕುಸಿತಕ್ಕೊಳಗಾಗಿದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ರವಿವಾರ ಭೂ ಕುಸಿತ ಉಂಟಾಗಿರುವ ಸಾಧ್ಯತೆ ಎಂದು ವ್ಯಕ್ತಪಡಿಸಲಾಗಿದೆ.
ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶವಾಗಿದ್ದು ಜನ ವಾಸಿಸುವ ಸ್ಥಳದಿಂದ ಸುಮಾರು 3 ಕಿಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ.
ಕಾಡುಮನೆ ಕೆಳಭಾಗದಲ್ಲಿ 25 ರಿಂದ 30 ಕುಟುಂಬಗಳು ವಾಸಿಸುತ್ತಿದ್ದು ಸೋಮವಾರ ಕಾಡಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಅನುಮಾನಗೊಂಡು ಸ್ಥಳ ಪರಿಶೀಲಿಸಿದಾಗ ಭೂಕಿಸಿತ ಸಂಭವಿಸಿರುವುದು ಬೆಳಕಿಗೆ ಬಂದಿದೆ.
ದಿಡುಪೆ ಸುತ್ತಮುತ್ತ ಪ್ರದೇಶ ಅತೀ ಅಪಾಯಕಾರಿಯಾಗಿದ್ದು, ಪದೇ ಪದೇ ಗುಡ್ಡ ಕುಸಿತ ಉಂಟಾಗಿರುವುದರಿಂದ ಜನ ಆತಂಕದಲ್ಲೇ ವಾಸಿಸುವಂತಾಗಿದೆ.