ಬಂಟ್ವಾಳ: ಗಣರಾಜ್ಯೋತ್ಸವ ಪ್ರಯುಕ್ತ ಹೊಸ ದಿಲ್ಲಿಯ ಕರ್ತವ್ಯ ಪಥದಲ್ಲಿ ಗುರು ವಾರ ನಡೆಯಲಿರುವ ಪಥಸಂಚಲನದಲ್ಲಿ ಭಾರತೀಯ ತಟರಕ್ಷಣ ಪಡೆ (ಕೋಸ್ಟ್ ಗಾರ್ಡ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಸೇರಾ ನಿವಾಸಿ ಮಿಥುನ್ ಕುಮಾರ್ ಭಾಗವಹಿಸಲಿದ್ದಾರೆ. ಅವರು ಈ ಬಾರಿ ಕೋಸ್ಟ್ ಗಾರ್ಡ್‌ನಿಂದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಏಕೈಕ ಕನ್ನಡಿಗರಾಗಿದ್ದಾರೆ.
ಮಿಥುನ್ 4 ವರ್ಷಗಳಿಂದ ತಟರಕ್ಷಣ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಥಸಂಚಲನದಲ್ಲಿ ಪಾಲ್ಗೊಳ್ಳುವ ಕೋಸ್ಟ್ ಗಾರ್ಡ್‌ನ ಒಂದು ತಂಡದಲ್ಲಿ 144 ಮಂದಿ ಸದಸ್ಯರಿದ್ದು, ಮಿಥುನ್ ಒಬ್ಬರಾಗಿದ್ದಾರೆ.
ಪ್ರಸ್ತುತ ವಿಶಾಖಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಉತ್ತಮ ಮಾರ್ಚಿಂಗ್‌ನ ಆಧಾರದಲ್ಲಿ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ನ. 1ರಿಂದ ನೊಯಿಡಾದಲ್ಲಿ ತರಬೇತಿ ನಡೆದು, ಜನವರಿಯ ಬಳಿಕ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ತರಬೇತಿ ನಡೆದಿತ್ತು.
ಸೇರಾ ದಿ| ಕೃಷ್ಣಪ್ಪ ಪೂಜಾರಿ ಹಾಗೂ ದಿ| ಭಾರತಿ ದಂಪತಿಯ ಪುತ್ರನಾಗಿರುವ ಅವರು ಸೇರಾ, ಮಾಣಿ, ಮೊಡಂಕಾಪು ಹಾಗೂ ವಳಚ್ಚಿಲ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು.