ನವದೆಹಲಿ: ಸಾಮಾಜಿಕ ಜಾಲತಾಣಗಳು ಉಗ್ರ ಸಂಘಟನೆಗಳ ಟೂಲ್ ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿ ಬಳಕೆಯಾಗುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರ ನಿಗ್ರಹ ಸಮಿತಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, “ಇತ್ತೀಚಿನ ವರ್ಷಗಳಲ್ಲಿ ಉಗ್ರ ಸಂಘಟನೆಗಳು ಮತ್ತು ಅದರ ಸೈದ್ಧಾಂತಿಕ ಬೆಂಬಲಿಗರು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ,’ ಎಂದರು.
“ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಪ್ರಗತಿಯ ಮೇಲೆ ಆಕ್ರಮಣ ಮಾಡಲು ತಂತ್ರಜ್ಞಾನ ಮತ್ತು ಹಣ ಬಳಕೆಯಾಗುತ್ತಿದೆ. ಮಾನುಕುಲಕ್ಕೆ ಎದುರಾಗಿರುವ ಗಂಭೀರ ಬೆದರಿಕೆಗಳಲ್ಲಿ ಭಯೋತ್ಪಾದನೆಯೂ ಒಂದು,’ ಎಂದರು.
ಮುಂಬೈ ದಾಳಿಗೆ ತಂತ್ರಜ್ಞಾನದ ಮೊರೆ:
“26/11ರ ಮುಂಬೈ ದಾಳಿಯಲ್ಲಿ ಉಗ್ರ ಸಂಘಟನೆಗಳು ತಂತ್ರಜ್ಞಾನ ಬಳಸಿಕೊಂಡಿತು. ವಾಯ್ಸ ಓವರ್ ಇಂಟರ್‌ನೆಟ್ ಪ್ರೋಟೋಕಾಲ್ ಮೂಲಕ ದಾಳಿಯನ್ನು ಸಂಘಟಿಸಲಾಗಿತ್ತು,’ ಎಂದು ಜೈಶಂಕರ್ ವಿವರಿಸಿದರು.
Related Articles
ಉಗ್ರರಿಂದ ಡ್ರೋನ್‌ಗಳ ಬಳಕೆ:
“ಉಗ್ರ ಸಂಘಟನೆಗಳು ಮತ್ತು ಸಂಘಟಿತ ಅಪರಾಧ ಜಾಲಗಳು ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಬಳಸುತ್ತಿವೆ. ಸರ್ಕಾರಗಳು ಈ ಬಗ್ಗೆ ಚಿಂತೆಗೀಡಾಗಿವೆ. ಭಯೋತ್ಪಾದಕ ಉದ್ದೇಶಗಳಿಗಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಳಸುತ್ತಿರುವುದು ಗಂಭೀರ ವಿಷಯವಾಗಿದೆ,’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
“ಕಳೆದ ಎರಡು ದಶಕಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಯೋತ್ಪಾದನೆಯನ್ನು ಎದುರಿಸಲು ರೂಪುರೇಷೆಗಳನ್ನು ರೂಪಿಸುತ್ತಿದೆ. ಭಯೋತ್ಪಾದನೆಯನ್ನು ಸರ್ಕಾರಿ ಪ್ರಾಯೋಜಿತ ಉದ್ಯಮವಾಗಿ ಪರಿವರ್ತಿಸಿರುವ ದೇಶಗಳ ಬಣ್ಣ ಬಯಲಾಗುವಂತೆ ಮಾಡಲು ವಿಶ್ವಸಂಸ್ಥೆಯ ಕ್ರಮಗಳು ಪರಿಣಾಮಕಾರಿಯಾಗಿವೆ,’ ಎಂದು ಹೇಳಿದರು.
ಭಾರತದಿಂದ 5,00,000 ಡಾಲರ್ ನೆರವು:
“ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತವು ಈ ವರ್ಷ ಉಗ್ರ ನಿಗ್ರಹಕ್ಕಾಗಿ ವಿಶ್ವಸಂಸ್ಥೆಯ ಟ್ರಸ್ಟ್‌ಗೆ 5,00,000 ಅಮೆರಿಕನ್ ಡಾಲರ್ ನೆರವು ನೀಡುತ್ತಿದೆ,’ ಎಂದು ಜೈಶಂಕರ್ ಘೋಷಿಸಿದರು.
ಒಂದುಗೂಡಿ ಕ್ರಮ ಕೈಗೊಳ್ಳುವ ಅಗತ್ಯವಿದೆ:
“ನೂತನ ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಉಗ್ರರ ಸವಾಲನ್ನು ಎದುರಿಸಲು ಜಾಗತಿಕವಾಗಿ ದೇಶಗಳು ಒಂದುಗೂಡಿ ಕ್ರಮ ಕೈಗೊಳ್ಳುವ ಅಗತ್ಯವಿದೆ,’ ಎಂದು ಇದೇ ವೇಳೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಪ್ರತಿಪಾದಿಸಿದರು.