ಗಂಗಾವತಿ: ಎಸ್ಸಿ ಮೀಸಲಾತಿಯನ್ನು ಮೇಲ್ವರ್ಗದ ಕೆಲವರು ದುರುಪಯೋಗ ಮತ್ತು ಎಸ್ಸಿ ಮೀಸಲಾತಿ ಕಲ್ಪಿಸುವಂತೆ ವೀರಶೈವ ಜಂಗಮರು ಪ್ರತಿಭಟನೆಯ ಮೂಲಕ ಸರಕಾರದ ಮೇಲೆ ಒತ್ತಡ ಮಾಡುತ್ತಿರುವುದನ್ನು ಖಂಡಿಸಿ ಅಲೆಮಾರಿ ಮತ್ತು ವೇಷಗಾರ ಸಮುದಾಯದ ವ್ಯಕ್ತಿಗಳು ಪರಮಾತ್ಮ ಶಿವ, ಶ್ರೀ ರಾಮ ಕೃಷ್ಣ, ಆಂಜನೇಯ ಸೇರಿದಂತೆ ದಾಸರು ವಚನಕಾರರ ವೇಷ ಧರಿಸಿಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆ ಒಕ್ಕೂಟ ಪ್ರಗತಿಪರ ಚಿಂತಕರ ಒಕ್ಕೂಟ ಮತ್ತು ಅಲೆಮಾರಿ ಬುಡ್ಗ ಜನಾಂಗದ ಒಕ್ಕೂಟದ ನೇತೃತ್ವದಲ್ಲಿ ಎಸ್ ಟಿ ಮೀಸಲಾತಿಯನ್ನು ವೀರಶೈವ ಜಂಗಮರಿಗೆ ನೀಡುವುದನ್ನು ವಿರೋಧಿಸಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಶ್ರೀ ಚನ್ನಬಸವಸ್ವಾಮಿ ವೃತ್ತದಿಂದ ಕೃಷ್ಣದೇವರಾಯ ವೃತ್ತದವರೆಗೂ ಜರುಗಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡ ಕುಂಟೋಜಿ ಮರಿಯಪ್ಪ, ಪ್ರಗತಿಪರ ಚಿಂತಕ ಜೆ. ಭಾರದ್ವಾಜ್, ನ್ಯಾಯವಾದಿ ಈಶ್ವರಪ್ಪ ಹಂಚಿನಾಳ ಮಾತನಾಡಿ, ಮೇಲುವರ್ಗದ ವೀರಶೈವ ಜಂಗಮರು ಎಸ್ಸಿ ಮೀಸಲಾತಿಯನ್ನು ಬೇಡ ಜಂಗಮ ಹೆಸರಿನಲ್ಲಿ ಪಡೆಯುತ್ತಿರುವುದು ಸಂವಿಧಾನಕ್ಕೆ ಮಾಡಿದ ದೊಡ್ಡ ದ್ರೋಹವಾಗಿದೆ. ಬುಡ್ಗ ಜಂಗಮ ಜಾತಿ ಸಂವಿಧಾನದಲ್ಲಿ ಗುರುತಿಸಲ್ಪಟ್ಟ ಜಾತಿಯಾಗಿದ್ದು ಹಲವು ದಶಕಗಳಿಂದ ಬುಡುಗ ಜಂಗಮ ಅಲೆಮಾರಿ ಜನಾಂಗದವರು ಎಸ್ಸಿ ಪ್ರಮಾಣಪತ್ರ ಪಡೆದಿದ್ದಾರೆ. ಇವರ ಹೆಸರಿನಲ್ಲಿ ಇದೀಗ ಮೇಲ್ವರ್ಗದ ವೀರಶೈವ ಜಂಗಮರು ಎಸ್ಸಿ ಪ್ರಮಾಣ ಪತ್ರ ಪಡೆಯಲು ಹೋರಾಟ ನಿರಂತರ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಈ ಹೋರಾಟಕ್ಕೆ ರಾಜ್ಯ ಸರಕಾರ ಸೊಪ್ಪು ಹಾಕಬಾರದು. ಶಿಕ್ಷಣವಂತರು ಹಣವಂತರು ಸ್ಥಿತಿವಂತರಾಗಿರುವ ಮೇಲ್ವರ್ಗದ ವೀರ ಶೈವ ಜಂಗಮರು ಎಸ್ಸಿ ಮೀಸಲಾತಿ ಕೇಳುತ್ತಿರುವುದು ಖಂಡನೀಯವಾಗಿದೆ ಎಂದರು.
ಪ್ರತಿಭಟನೆಯ ಸಂದರ್ಭದಲ್ಲಿ ವೇಷಧಾರಿಗಳು ರಾಮಾಯಣ ಮಹಾಭಾರತ ಪ್ರಮುಖ ಪಾತ್ರಗಳ ವೇಷ ಧರಿಸಿ ರಾಕ್ಷಸನ ವೇಷಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಭೀಕರ ಅಪಘಾತ: ಸಿಎಂ ಯೋಗಿ ದೇವಸ್ಥಾನದ ಕಚೇರಿಯ ವಿಶೇಷ ಅಧಿಕಾರಿ ಸಾವು
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಜೆ .ಭಾರದ್ವಾಜ್ .ದಲಿತ ಮುಖಂಡರಾದ ಮರಿಯಪ್ಪ ಕುಂಟೋಜಿ, ದೊಡ್ಡ ಬೋಜಪ್ಪ, ಬಸವರಾಜ್ ಪೂಜಾರ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಜೆ ಮರಿಯಪ್ಪ, ಸಣ್ಣ ಮಾರೆಪ್ಪ ಹುಲುಗಪ್ಪ ಮಾಸ್ಟರ್, ಜೋಗದ ಹನುಮಂತಪ್ಪ ನಾಯಕ, ಲಕ್ಷ್ಮಣ ನಾಯಕ, ವೈ ರಾಮಣ್ಣ, ಅಶೋಕಪ್ಪ ವಿಜಯ್ ವೆಂಕಟೇಶ ಕೆ. ಅಂಬಣ್ಣ, ಹುಲುಗಪ್ಪ ದೇವರಮನಿ, ಹುಲುಗಪ್ಪ ಮಾಗಿ ಸೇರಿದಂತೆ ದಲಿತ ಪ್ರಗತಿಪರ ಮತ್ತು ಬುಡ್ಗ ಜಂಗಮ ಸಮಾಜದ ಮುಖಂಡರು ಇದ್ದರು.