Advertisement

ಸಹಕಾರ ಸಂಘದಲ್ಲಿ 71 ಲಕ್ಷ ರೂ. ದುರ್ಬಳಕೆ

01:47 PM Sep 21, 2022 | Team Udayavani |

ಕುದೂರು: ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ 71 ಲಕ್ಷ ರೂ. ದುರ್ಬಳಕೆಯಿಂದ ಪ್ರತಿ ವರ್ಷ ಸಂಘದಲ್ಲಿ ನಷ್ಟ ಅನುಭವಿಸುವಂತಾಗಿದೆ. ಕುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿನ 2021-22ನೇ ಸಾಲಿನ ಲೆಕ್ಕಪರಿಶೋಧನ ವರದಿಯಲ್ಲಿ 1998ರಿಂದ 2000ರ ಅವಧಿಯ ಆಡಳಿತ ಮಂಡಳಿ ಸದಸ್ಯರ ಹಾಗೂ ವ್ಯವಸ್ಥಾಪಕರು ಜಂಟಿಯಾಗಿ ಜವಾಬ್ದಾರಿಯಾಗಿ 71.22700 ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಯ್ದೆ 68ರಂತೆ 1,90,000 ರೂ. ದುರ್ಬಳಕೆಯಾಗಿದೆ ಎಂದು ನಮೂದಿಸಲಾಗಿದೆ.

Advertisement

ಲಕ್ಷಾಂತರ ರೂ. ಹಣ ದುರ್ಬಳಕೆಯಾಗಿದೆ ಎಂಬ ಮಾಹಿತಿ ಬಹುತೇಕ ನಿರ್ದೇಶಕರಿಗೆ ಇಲ್ಲ. ವಸೂಲಿ ಮಾಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ನಿರ್ದೇಶಕರಿಗೆ ಇಲ್ಲವಾಗಿದೆ. ನಿರ್ದೇಶಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದರೂ, ಸಹಕಾರ ಸಂಘದಲ್ಲಿನ ಲಕ್ಷಾಂತರ ರೂ. ದುರ್ಬಳಕೆಯಾಗಿರುವ ಕುರಿತು ಪ್ರತಿ ವರ್ಷ ಆಡಿಟ್‌ ವರದಿಯಲ್ಲಿ ವರದಿಯಾಗುತ್ತಿದ್ದರೂ, ಈ ಕುರಿತು ಇಲ್ಲಿಯವರೆಗೂ ಯಾವ ನಿರ್ದೇಶಕರು ತಲೆ ಕೆಡಿಸಿಕೊಂಡಿಲ್ಲ. ಹಣ ದುರ್ಬಳಕೆ ಮಾಡಿರುವವರು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ತಪ್ಪಿತಸ್ಥರಿಂದ ಹಣವನ್ನು ವಸೂಲಿ ಮಾಡಲಾಗಿದೆಯೇ, ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಸ್ಪಷ್ಟ ಮಾಹಿತಿ ಇಲ್ಲದಿರುವುದು ನಿರ್ದೇಶಕರ ಬೇಜವಾಬ್ದಾರಿ ತನಕ್ಕೆ ನಿದರ್ಶನವಾಗಿದೆ.

ಅಧಿಕಾರಿಗಳು ಮೌನ: ಈ ಸಂಬಂಧ ನಿರ್ದೇಶಕರು ಇದಕ್ಕೂ ತಮಗೂ ಸಂಬಂಧವಿಲ್ಲವೇನೂ ಎಂಬಂತೆ ವರ್ತಿಸುತ್ತಿದ್ದಾರೆ. ಸಹಕಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಅವರು ಸಹ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ರೈತ ರಾಯಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್ಚೆತ್ತುಕೊಳ್ಳಿ: ನಿರ್ದೇಶಕರು ಹಣ ದುರ್ಬಳಕೆ ಬಗ್ಗೆ ಮಾಹಿತಿ ಇಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ನೀಡುವ ಬದಲು, ಇನ್ನಾದರೂ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಷೇರುದಾರರು ಆಗ್ರಹಿಸಿದ್ದಾರೆ. ಲಾಭವೆಲ್ಲ ನಷ್ಟದ ಪಾಲು: ಕುದೂರು ವಿಎಸ್‌ಎಸ್‌ ಎನ್‌ ಈ ವರ್ಷ 311273 ರೂ. ಲಾಭ ಗಳಿಕೆಯಾಗಿದ್ದರೂ, ಇಂದಿನ ಸಾಲಿನ ನಷ್ಟದ ಹಣವೇ ಸುಮಾರು 1 ಕೋಟಿ 3 ಲಕ್ಷ 76 ಸಾವಿರ ಇದೆ. ಈ ವರ್ಷದ ಲಾಭವನ್ನು ಅದರಲ್ಲಿ ಕಳೆದರೆ 2021-22 ಸಾಲಿನ ಸಂಘವು 1 ಕೋಟಿ 65 ಸಾವಿರ ರೂ.ನಷ್ಟ ಅನುಭವಿ ಸುವಂತಾಗಿದೆ. ಪ್ರತಿ ವರ್ಷ ಗಳಿಸಿದ ಲಾಭವೆಲ್ಲ ನಷ್ಟದ ಪಾಲಾಗುತ್ತಿದೆ ಎಂದು ತಿಳಿದು ಬಂದಿದೆ.

71 ಲಕ್ಷಕ್ಕೂ ಅಧಿಕ ಹಣ ದುರ್ಬಳಕೆ ಆಗಿರುವುದು 1998-2000 ಸಾಲಿನ ಆಡಳಿತ ಮಂಡಳಿ ಅವಧಿಯಲ್ಲಿ. ನಮ್ಮ ಅಧಿಕಾರದ ಅವಧಿಯಲ್ಲಿ ಅಲ್ಲ. ದುರ್ಬಳಕೆ ಕುರಿತು ಯಾವ ಅಧಿಕಾರಿಯೂ ನಿರ್ದೇಶಕರಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ● ನಟರಾಜು, ಅಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

Advertisement

ಈ ಸಾಲಿನ ನಿರ್ದೇಶಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆಯುತ್ತಿದೆ. ಲಕ್ಷಾಂತರ ರೂ. ದುರ್ಬಳಕೆ ಹಣ ವಸೂಲಿ ಮಾಡುವಲ್ಲಿ ಹಾಗೂ ಕಾನೂನು ಕ್ರಮ ಕೈಗೊಳ್ಳವಲ್ಲಿ ನಿರ್ದೇಶಕರು ಮೌನವಹಿಸಿರುವುದೇಕೆ? ರಾಯಪ್ಪಗೌಡ, ರೈತ

 

ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next