Advertisement

ಮಾಡದ ತಪ್ಪಿಗೆ ಸಾರಿಗೆ ನೌಕರರ ಪರಿತಾಪ

05:29 PM Jan 15, 2022 | Team Udayavani |

ಹುಬ್ಬಳ್ಳಿ: ಸಾರಿಗೆ ನಿಗಮಗಳಲ್ಲಿನ ನೌಕರರ ನೋವಿಗೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಪೂರ್ಣ ಪ್ರಮಾಣದ ಕೆಲಸ ಮಾಡಿದರೂ ಅರ್ಧ ವೇತನ ಪಡೆಯುವ, ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳಿಗೂ ತಿಂಗಳುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಇದರ ನಡುವೆ ಭಾರತೀಯ ಜೀವ ವಿಮೆಯಿಂದ ಬರಬೇಕಾದ ಮನಿಬ್ಯಾಕ್‌ ಪಾಲಿಸಿ ಸೌಲಭ್ಯ, ಮರಣಾನಂತರದ ಪರಿಹಾರಕ್ಕಾಗಿ ಸಂಕಷ್ಟ ಪಡಬೇಕಾಗಿದೆ. ವೇತನದಲ್ಲಿ ನೌಕರರ ಪಾಲಿನ ಕಂತು
ಕಡಿತವಾಗಿದ್ದರೂ ವಿಮಾ ಕಂಪೆನಿಗೆ ಸಮಯಕ್ಕೆ ಪಾವತಿಯಾಗಿಲ್ಲ ಎಂಬ ಗೊಂದಲ ನೌಕರರಿಗೆ ಸಂಕಷ್ಟ ತಂದೊಡ್ಡಿದೆ.

Advertisement

ಹುಬ್ಬಳ್ಳಿ ವಿಭಾಗ ಹಾಗೂ ಹುಬ್ಬಳ್ಳಿ ನಗರ ಸಾರಿಗೆ ವಿಭಾಗದಲ್ಲಿ ನೌಕರರು ವಿಮಾ ಕಂಪೆನಿಯಿಂದ ಪಡೆಯುವ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ. ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.

ಅಮಾನತು ಖಾತೆಯಲ್ಲಿ ಹಣ: ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದಾಯ ಇಲ್ಲದೆ ಮೊದಲೇ ನಷ್ಟದಿಂದ ಸೊರಗಿದ್ದ ನಿಗಮಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ನೌಕರರಿಗೆ ವೇತನ ನೀಡುವುದಕ್ಕೂ ಸಾಧ್ಯವಾಗದೆ, ಸರಕಾರದ ಕಡೆ ಕೈಚಾಚಿದ್ದರಿಂದ ವಿಮಾ ಕಂತು ಪಾವತಿಸುವುದು ಸಾಧ್ಯವಾಗಿರಲಿಲ್ಲ. ಆದರೆ, ನೌಕರರ ಪ್ರತಿ ತಿಂಗಳ ವೇತನದಲ್ಲಿ ಮಾತ್ರ ಅವರ ಪಾಲಿನ ಕಂತು ಕಡಿತವಾಗಿತ್ತು.

ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಲ್ಲಿ ಸುಮಾರು 4,000 ನೌಕರರ ವಿಮಾ ಕಂತು ಆಗಿ ಜೂನ್‌ 2020ರಿಂದ ಆಗಸ್ಟ್‌ 2021ರವರೆಗೆ ಒಟ್ಟು 6 ಕೋಟಿ ರೂ.ಗಳನ್ನು ಎಲ್‌ಐಸಿ ಕಚೇರಿಗೆ ಪಾವತಿ ಮಾಡಲಾಗಿದೆ. ಆದರೆ, ವಿಮಾ ಕಂತು ಪಾವತಿ ವಿಳಂಬವಾಗಿರುವುದರಿಂದ ಎಲ್‌ ಐಸಿಯವರು ನೌಕರರ ವಿಮಾ ಖಾತೆಗಳಿಗೆ ಈ ಹಣವನ್ನು ಪಾವತಿಸದೆ, ಅಮಾನತು ಖಾತೆಯಲ್ಲಿ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ನೌಕರರು ಹಲವು ಸಮಸ್ಯೆಗಳನ್ನು
ಎದುರಿಸುವಂತಾಗಿದೆ.

ಮರಣ ಹೊಂದಿದ ನೌಕರರ ಅವಲಂಬಿತರು ವಿಮಾ ಪರಿಹಾರ ಪಡೆಯಲು ಮುಂದಾದರೆ ಅದು ದೊರೆಯುತಿಲ್ಲ. ಅದೇ ರೀತಿ ಮನಿಬ್ಯಾಕ್‌ ಪಾಲಿಸಿ ಮಾಡಿಸಿದವರಿಗೂ ಹಣ ಹಿಂದಿರುಗುವ ಅವಧಿ ಮುಗಿದರೂ ಹಣ ದೊರೆತಿಲ್ಲ. ಅಂದಾಜು 10ರಿಂದ 30 ಸಾವಿರ ರೂ.ವರೆಗೆ ವಿವಿಧ ರೂಪದಲ್ಲಿ ನೌಕರರಿಗೆ ಮನಿಬ್ಯಾಂಕ್‌ ಪಾಲಿಸಿ ಅಡಿಯಲ್ಲಿ ಹಣ ಬರಬೇಕಾಗಿದೆ. ಈ ಹಣಕ್ಕಾಗಿ ಅಂದಾಜು 1,000ಕ್ಕೂ ಅಧಿಕ ನೌಕರರು ಕಾಯ್ದು ಕುಳಿತಿದ್ದಾರೆ ಎನ್ನಲಾಗುತ್ತಿದೆ.

Advertisement

ವಾಯವ್ಯ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಹಾಗೂ ಎಲ್‌ಐಸಿ ಅಧಿಕಾರಿಗಳು ಕುಳಿತು ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಗೊಂದಲ ನಿವಾರಣೆ ಮಾಡಿ ನೌಕರರಿಗೆ ಸಕಾಲಕ್ಕೆ ಪರಿಹಾರ ದೊರೆಯುವಂತೆ ಮಾಡಲು ಸೂಕ್ತ ಹಾಗೂ ತ್ವರಿತ ಕ್ರಮಕ್ಕೆ ಮುಂದಾಗಬೇಕಾಗಿದೆ.

ಕೇಂದ್ರ ಸಚಿವರಿಗೆ ಮನವಿ
ಎಲ್‌ಐಸಿ ಕಂತು ಪಾವತಿ ವಿಳಂಬದಿಂದ ಪರಿಹಾರ ಪಡೆಯಲು ಸಾಧ್ಯವಾಗದೆ ಸುಮಾರು 4,000 ನೌಕರರು ಸಂಕಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ನೌಕರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಪ್ರತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೂ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಆದಷ್ಟು ಬೇಗ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಮ್ಮೆ ಯಾಕೆ ಪಾವತಿಸಬೇಕು?
ಮರಣ ಹೊಂದಿದ ನೌಕರರ ಅವಲಂಬಿತರು, ಮನಿಬ್ಯಾಕ್‌ ಪಾಲಿಸಿ ಮಾಡಿಸಿದ ನೌಕರರು ಪರಿಹಾರಕ್ಕೆ ಎಲ್‌ಐಸಿ ಕಚೇರಿಗೆ ಹೋಗಿ ಕೇಳಿದರೆ, ಖಾತೆಗೆ ಹಣ ಜಮಾ ಆಗಲು ತಾಂತ್ರಿಕ ತೊಂದರೆ ಎದುರಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ ವಿಳಂಬವಾಗಿ ವಿಮಾ ಕಂತು ಪಾವತಿ ಆಗಿರುವುದಿಂದ ವಿಳಂಬ ಅವಧಿಯ ದಂಡ ಪಾವತಿಸಬೇಕಾಗಿದೆ. ಈ ಬಗ್ಗೆ ಧಾರವಾಡ ವಿಭಾಗೀಯ ಕಚೇರಿಯಿಂದ ಆದೇಶ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಪರಿಹಾರ ಬೇಕು ಎಂದಾದರೆ ವಿಮಾ ಕಂತಿನ ಬಾಕಿ ಹಾಗೂ ದಂಡದ ಹಣ ಪಾವತಿಸಿ, ಖಾತೆಯನ್ನು ಚಾಲ್ತಿಗೊಳಿಸಿದ ನಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಲಾಗುತ್ತಿದೆ ಎನ್ನಲಾಗಿದ್ದು, ಈಗಾಗಲೇ ಮಾಸಿಕವಾಗಿ ತಮ್ಮ ವೇತನದಲ್ಲಿ ವಿಮಾ ಕಂತು ಹಣ ಕಡಿತಗೊಂಡಿದ್ದು, ಮತ್ತೂಮ್ಮೆ ಯಾಕೆ ಪಾವತಿಸಬೇಕು ಎಂಬುದು ನೌಕರರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next