Advertisement

ಉ.ಪ್ರದೇಶಕ್ಕೆ ನಾಯಕರ ದಂಡು

06:00 AM Jul 03, 2018 | |

ಲಕ್ನೋ/ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಲೇ ತಯಾರಿ ಆರಂಭಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಉತ್ತರ ಪ್ರದೇಶದತ್ತ ಕಣ್ಣು ನೆಟ್ಟಿವೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದ ಕಡೆಗೆ ಮುಖಮಾಡಲು ಘಟಾನುಘಟಿಗಳ ದಂಡೇ ಸನ್ನದ್ಧವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಮಘರ್‌ಗೆ ಜೂ.28ರಂದು ಭೇಟಿ ನೀಡಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇದೀಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಜು.4ರಿಂದ 2 ದಿನಗಳ ಕಾಲ ತಮ್ಮ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ವಾರಾಣಸಿ, ಮಿರ್ಜಾಪುರ್‌ ಮತ್ತು ಆಗ್ರಾಗಳಿಗೆ ಭೇಟಿ ನೀಡಲಿದ್ದಾರೆ. 

Advertisement

ರಾಹುಲ್‌ ಗಾಂಧಿ ತಮ್ಮ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದರ ಜತೆಗೆ ತಾನು ಬೆಳೆದ ಬೆಳೆಯನ್ನು ಮಾರಲು 4 ದಿನಗಳ ಕಾಲ ಬಿಸಿಲಲ್ಲಿ ನಿಂತು ಅಸುನೀಗಿದ ಮುಸ್ಲಿಂ ರೈತನ ನಿವಾಸಕ್ಕೂ ಭೇಟಿ ನೀಡಲಿದ್ದಾರೆ. 

ಇನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕಾಶಿ, ಗೋರಖ್‌ಪುರ್‌ ಮತ್ತು ಅವಧ್‌ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ನಾಯಕರನ್ನು ಭೇಟಿಯಾಗಲಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದ ನೇತೃತ್ವ ವಹಿಸುವ ತಂಡವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಸಂಜಯ ರಾಯ್‌ ತಿಳಿಸಿದ್ದಾರೆ. ಜು.5ರಂದು ಆಗ್ರಾದಲ್ಲಿ ಬುದ್ಧಿಜೀವಿಗಳ ಸಭೆಯನ್ನುದ್ದೇಶಿಸಿ ಅಮಿತ್‌ ಶಾ ಮಾತನಾಡಲಿದ್ದಾರೆ. 

14, 15ರಂದು ಮೋದಿ ಪ್ರವಾಸ: ಪ್ರಧಾನಿ ಮೋದಿ ಜು.14 ಮತ್ತು 15ರಂದು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ವಾರಾಣಸಿ ಮತ್ತು ಅಜಂಗಡದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 80 ಸ್ಥಾನಗಳ ಪೈಕಿ 73ನ್ನು ಗೆದ್ದಿತ್ತು. ಹೀಗಾಗಿ, ಅದೇ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಬಿಜೆಪಿಗೆ ಅನಿವಾರ್ಯ.

ಇಂದು ಕೇರಳಕ್ಕೆ ಶಾ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ಕೇರಳಕ್ಕೆ ಭೇಟಿ ನೀಡಲಿದ್ದು, ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಬೆಳಗ್ಗೆ ಇಲ್ಲಿಗೆ ಆಗಮಿಸುವ ಅವರು ಮೊದಲಿಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ನಂತರ ಆಯ್ದ ಜಿಲ್ಲೆಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜುಲೈ 22ರಂದು ಅವರ ದೇಶವ್ಯಾಪಿ ಪ್ರವಾಸ ಪೂರ್ಣಗೊಳ್ಳಲಿದೆ.

Advertisement

7,8ಕ್ಕೆ ಸಮಾಲೋಚನೆ: ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಸಲುವಾಗಿ ಕಾನೂನು ಆಯೋಗ ಜು.7,8ರಂದು ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಲಿದೆ. ಹೊಸದಿಲ್ಲಿಯಲ್ಲಿ ಈ ಸಭೆ ನಡೆಯಲಿದ್ದು, ಮಾನ್ಯತೆ ಪಡೆದ 7 ರಾಷ್ಟ್ರೀಯ ಪಕ್ಷಗಳು ಮತ್ತು 59 ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿ ಸಲಿದ್ದಾರೆ. ಈ ಹಿಂದೆ ಕೂಡ ಕಾನೂನು ಆಯೋಗ ಇದೇ ಮಾದರಿಯ ಸಭೆ ನಡೆಸಿದ್ದರೂ, ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. 

ಚುನಾವಣೆಗೆ ಮುನ್ನ ಯಾವ ಮೈತ್ರಿಯೂ ಇಲ್ಲ: ಯೆಚೂರಿ
ಕಳೆದ 3-4 ದಶಕಗಳ ನನ್ನ ರಾಜಕೀಯ ಅನುಭವದ ಪ್ರಕಾರ ಹೇಳುವುದಾದರೆ, ಚುನಾವಣೆಗೆ ಮುನ್ನ ಯಾವುದೇ ಮೈತ್ರಿ ಇರುವುದಿಲ್ಲ. ತೃತೀಯ ರಂಗವೋ, ಇನ್ನೊಂದು ರಂಗವೋ ರಚನೆಯಾಗುವುದಿದ್ದರೂ, ಅದು ಚುನಾವಣೆಯ ನಂತರವೇ ರಚನೆಯಾಗುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಸಿಎನ್‌ಎನ್‌ ನ್ಯೂಸ್‌ 18ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದು, ಲೋಕ ಸಭೆ ಚುನಾವಣೆಗೆ ಮುನ್ನ ತೃತೀಯ ರಂಗ ರಚನೆಯಾಗುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಇದೇ ವೇಳೆ, ಎಸ್‌ಪಿ-ಬಿಎಸ್‌ಪಿ ಒಂದಾಗಿದ್ದು ಚುನಾವಣಾ ಮೈತ್ರಿ. ಆದರೆ ಪಿಣರಾಯಿ ವಿಜಯನ್‌ ಮತ್ತು ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಡಿ ಕಾಣಿಸಿದ್ದು ಚುನಾವಣಾ ಮೈತ್ರಿಯಲ್ಲ. ಅದು ಕೇಂದ್ರ-ರಾಜ್ಯ ಸಂಬಂಧಕ್ಕೆ ಸಂಬಂಧಿ ಸಿದ ವಿಷಯವಾಗಿತ್ತು.  ದೇಶದ ಸಂವಿಧಾನದ ರಕ್ಷಣೆಗಾಗಿ ನಾವು ಅಂದು ಒಂದಾದೆವು ಎನ್ನುವ ಮೂಲಕ ಟಿಎಂಸಿ ಜತೆ ಮೈತ್ರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಯೆಚೂರಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಬಿಹಾರದಲ್ಲಿ ಮಹಾಮೈತ್ರಿ ಯೊಂದಿಗೆ ನಮಗೇನೂ ಕೆಲಸವಿಲ್ಲ ಎಂದು ಸಿಪಿಐ ತಿಳಿಸಿದೆ. ಅಲ್ಲದೆ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಲೆಫ್ಟ್ ಡೆಮಾಕ್ರಾಟಿಕ್‌ ಸೆಕ್ಯುಲರ್‌ ಫ್ರಂಡ್‌(ಎಲ್‌ಡಿಎಸ್‌ಎಫ್)ನ ಅಡಿ ನಮ್ಮ ಪಕ್ಷ ಹೊಂದಾಣಿಕೆ ಮಾಡಿಕೊಂಡು, 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next