ಅಜೆಕಾರು: ಕಾರ್ಕಳ ತಾಲೂಕು ಶತಮಾನ ಸಂಭ್ರಮದಲ್ಲಿದ್ದು ಸ್ವರ್ಣ ಕಾರ್ಕಳ ನಿರ್ಮಿಸುವ ಗುರಿ ಶಾಸಕ ಸುನಿಲ್ ಕುಮಾರ್ ಹೊಂದಿದ್ದು ಶಿಕ್ಷಣ ಇಲಾಖೆಯ ಮೂಲಕ ಶೇ.100 ಎಸೆಸೆಲ್ಸಿ ಫಲಿತಾಂಶದೊಂದಿಗೆ ತಮ್ಮ ಕೊಡುಗೆ ನೀಡಲು ಮುಂದಾಗಿದೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಹೇಳಿದ್ದಾರೆ.
ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಪ್ರತಿಯೋರ್ವ ವಿದ್ಯಾರ್ಥಿ ಉತ್ತಮ ಫಲಿತಾಂಶ ತಂದು ಮಿಷನ್ 100 ಯೋಜನೆ ಯಶಸ್ವಿಗೊಳಿಸಬೇಕೆಂಬ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ, ಜನಪ್ರತಿನಿಧಿ ಗಳು ಕಾರ್ಕಳ ತಾಲೂಕಿನಲ್ಲಿ 10ನೇ ತರಗತಿಯಲ್ಲಿ 2,657 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಎಲ್ಲ ವಿದ್ಯಾರ್ಥಿ ಗಳು ತೇರ್ಗಡೆಗೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಒಂದೊಂದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದವರು ತಿಳಿಸಿದರು.
ಈಗಾಗಲೇ ಮಿಷನ್ -100 ಎಂಬ ಯೋಜನೆಯನ್ನು ಹಮ್ಮಿಕೊಂಡು ಸಮಾನ ಮನಸ್ಕ ಶಿಕ್ಷಣ ಪ್ರೇಮಿಗಳು ಹಾಗೂ ಚಿಂತಕರ ತಂಡವು ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಮುಂಜಾನೆ 5 ಗಂಟೆಗೆ ತೆರಳಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಜತೆಗೆ ಆತ್ಮಸ್ಥೆçರ್ಯ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಸೆ.27ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ,ಎಸ್. ಶಶಿಧರ್ ಹಾಗೂ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಹಾಗೂ ಇತರರ ತಂಡವು 8 ಶಾಲೆಗಳ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾರ್ಗದರ್ಶನ ನೀಡಿತು.
ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅನ್ನಪೂರ್ಣ, ಸರಕಾರಿ ಪದವಿಪೂರ್ವ ಕಾಲೇಜು ಬೈಲೂರಿನ ವಿದ್ಯಾರ್ಥಿ ಅಜಿತ್, ಜ್ಞಾನ ಸುಧಾ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಕ್ಷಿ, ಸರಕಾರಿ ಪ್ರೌಢ ಶಾಲೆ ಕಣಜಾರಿನ ವಿದ್ಯಾರ್ಥಿ ದೀಕ್ಷಿತ್, ಲಿಟ್ಲಫ್ಲವರ್ ಪ್ರೌಢ ಶಾಲೆ ರಂಗನಪಲ್ಕೆ ವಿದ್ಯಾರ್ಥಿ ಫ್ರೀನಾ, ಸರಕಾರಿ ಪ್ರೌಢಶಾಲೆ ಕಲ್ಯಾದ ವಿದ್ಯಾರ್ಥಿ ಶ್ರೇಷ್ಠ, ಸರಕಾರಿ ಪ್ರೌಢ ಶಾಲೆ ಪಳ್ಳಿಯ ಸುನೈನಾ ಅವರ ಮನೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಯಿತು. ಮಹಾತ್ಮಾ ಗಾಂಧಿ ವಸತಿ ಪ್ರೌಢ ಶಾಲೆಗೂ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ಸಂದರ್ಭ ಶಿಕ್ಷಣಾಧಿಕಾರಿ ಶಶಿಧರ್, ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಮಿಷನ್ 100ನ ನೋಡೆಲ್ ಅಧಿಕಾರಿ ವೆಂಕಟರಮಣ ಕಲ್ಕೂರ, ಎಲಿಯಾಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ರಾವ್, ಬೈಲೂರು ಶಿಕ್ಷಣ ಸಂಪನ್ಮೂಲ ವ್ಯಕ್ತಿ ಉಮೇಶ್ ನಾಯಕ್, ನಿಟ್ಟೆ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶಿವಾನಂದ, ಬಿ.ಆರ್.ಪಿ. ಸಂತೋಷ್ ಕುಮಾರ್ ಶೆಟ್ಟಿ ತಂಡದಲ್ಲಿದ್ದರು.