Advertisement

ಬ್ರಿಟಿಷ್‌ ಕಾಲದ ಸಬ್‌ಜೈಲ್‌ ಆವರಣ ಗೋಡೆ ನೆಲಸಮ

10:44 AM Jul 18, 2018 | |

ಪುತ್ತೂರು: ಶತಮಾನದ ಇತಿಹಾಸವಿದ್ದು, ಬ್ರಿಟಿಷ್‌ ಆಡಳಿತದ ಕಾಲದಲ್ಲಿ ನಿರ್ಮಾಣವಾಗಿದ್ದ ಪುತ್ತೂರಿನ ಹಳೆ ಸಬ್‌ಜೈಲ್‌ನ ಶಿಥಿಲಾವಸ್ಥೆಯಲ್ಲಿದ್ದ ಗೋಡೆಗಳನ್ನು ತಾಲೂಕು ಆಡಳಿತ ನೆಲಸಮ ಮಾಡಿದೆ. ಬ್ರಿಟಿಷ್‌ ಕಾಲದಲ್ಲಿ ಕೋರ್ಟ್‌ ಮತ್ತು ಸಬ್‌ಜೈಲ್‌ ಅಕ್ಕಪಕ್ಕದಲ್ಲೇ ಇದ್ದವು. ಅದಕ್ಕಾಗಿಯೇ ಬ್ರಿಟಿಷ್‌ ಸರಕಾರ ಸುಸಜ್ಜಿತ ಕಟ್ಟಡ ನಿರ್ಮಿಸಿತ್ತು. ಮುಂಭಾಗದಲ್ಲಿ ನ್ಯಾಯಾಲಯ ಮತ್ತು ಹಿಂಭಾಗದಲ್ಲಿ ಜೈಲು ಕಾರ್ಯಾಚರಿಸುತ್ತಿದ್ದವು. ಅನಂತರದಲ್ಲಿ ಕೋರ್ಟ್‌ ಸಮುಚ್ಚಯವನ್ನು ತಾಲೂಕು ಕಚೇರಿಯಾಗಿ ಪರಿವರ್ತಿಸಲಾಯಿತು. ಪುತ್ತೂರು ಸಬ್‌ಜೈಲ್‌ ಅನ್ನು ಸ್ಥಗಿತಗೊಳಿಸಿ ಮಂಗಳೂರಿಗೆ ವರ್ಗಾಯಿಸಿದ ಆನಂತರ ದಲ್ಲಿ ಈ ಜೈಲು ಅನಾಥವಾಯಿತು. ಕೆಲ ಕಾಲ ಈ ಜಾಗವನ್ನು ಖಜಾನೆಯಾಗಿ ಬಳಸಲಾಗಿತ್ತು. ಬಳಿಕ ನಿರ್ವಹಣೆ ಇಲ್ಲದ ಕಾರಣ ಜೀರ್ಣಾವಸ್ಥೆಗೆ ತಲುಪಿತ್ತು.

Advertisement

ಸಂಭಾವ್ಯ ಅನಾಹುತ ತಪ್ಪಿದೆ
ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಅವರು ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಹಳೆ ಜೈಲಿನ ಆವರಣ ಗೋಡೆ ಕೆಡಹುವುದೇ ಉತ್ತಮ ಎಂದು ತೀರ್ಮಾನಿಸಿ ಕ್ರಮ ಕೈಗೊಂಡು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

ಕಳೆದ ಮಳೆಗಾಲದಲ್ಲೇ ಕುಸಿದಿತ್ತು
ಸಬ್‌ಜೈಲ್‌ ಆವರಣದ ಉತ್ತರ ದಿಕ್ಕಿನ ಗೋಡೆಯ ಒಂದು ಪಾರ್ಶ್ವ ಕಳೆದ ಮಳೆಗಾಲ ದಲ್ಲಿಯೇ ಕುಸಿದಿತ್ತು. ಈ ಬಾರಿ ಪಶ್ಚಿಮ ದಿಕ್ಕಿನ ಗೋಡೆ ವಾಲಿತ್ತು. ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇತ್ತು. ಸುಮಾರು 100 ಮೀಟರ್‌ ಉದ್ದದ ಗೋಡೆ ಕೆಡವಲಾಗಿದ್ದು, ಪ್ರಸ್ತುತ ಸಬ್‌ಜೈಲ್‌ ಅವಶೇಷಗಳಲ್ಲಿ ಮಾತ್ರ ಕಾಣಿಸುತ್ತಿದೆ.

ಪಕ್ಕದಲ್ಲೇ ಇತ್ತು ವಿದ್ಯುತ್‌ ಕಂಬ
ಆವರಣ ಗೋಡೆಯ ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯ ವಠಾರಕ್ಕೆ ಬೆಳಕು ಕೊಡುವ ಬೀದಿ ದೀಪಗಳಿದೆ. ಗೋಡೆ ಉರುಳಿದರೆ ಈ ವಿದ್ಯುತ್‌ ಕಂಬಗಳು ಕೂಡ ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

‘ಸುದಿನ’ ಎಚ್ಚರಿಸಿತ್ತು 
ಹಳೆಯದಾದ ಜೈಲಿನ ಆವರಣ ಗೋಡೆ ಬಿರುಕು ಬಿಟ್ಟು ವಾಲಿ ನಿಂತಿತ್ತು. ಇದರಿಂದ ಸರಕಾರಿ ಆಸ್ಪತ್ರೆ, ಸಾರ್ವಜನಿಕರಿಗೆ ಅಪಾಯ ಸಂಭವಿಸಬಹುದಾದ ಸಾಧ್ಯತೆಯ ಕುರಿತು ‘ಉದಯವಾಣಿ’ಯಲ್ಲಿ ಜೂ. 12ರಂದು ಸಚಿತ್ರ ವರದಿ ಪ್ರಕಟಿಸಿ ಎಚ್ಚರಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next