ಆರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಹಲವು ಕಾರಣಿಕಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ಬಳಿಯ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಮತ್ತೊಂದು ವೈಚಿತ್ರ್ಯ ಘಟಿಸಿದೆ.ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣವೊಂದರಲ್ಲಿ ಕಾಣೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವಿನ ಚಿನ್ನದ ಸರವು ಮೇ 27ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಉರಿಯುವ ಕಾಲುದೀಪಕ್ಕೆ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮದುವೆ ಸಮಾರಂಭದಲ್ಲಿ ಹೆತ್ತವರ ಜತೆಗಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನದ ಬಳಿಕ ಕಾಣೆಯಾಗಿತ್ತು. ಎಷ್ಟು ಹುಡುಕಾಡಿದರೂ ಸಿಗದೆ ಇದ್ದಾಗ ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳನ್ನು ಸರ ದೊರಕಿಸಿಕೊಡುವಂತೆ ಪ್ರಾರ್ಥಿಸಲಾಗಿತ್ತು.10 ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ದೈವಸ್ಥಾನದ ಮುಂಭಾಗದ ಕಾಲು ದೀಪವನ್ನು ಉರಿಸಲು ಬಂದ ಸಾನದ ಮನೆಯ ಪ್ರತಿನಿಧಿಗಳಿಗೆ ಕಾಲುದೀಪದಲ್ಲಿ ಚಿನ್ನದ ಸರ ಸುತ್ತಿಕೊಂಡು ಇರುವುದು ಕಂಡುಬಂತು. ಮಗುವಿನ ತಾಯಿ ಬಂದು ಪರಿ ಶೀಲಿಸಿದಾಗ ಕಳೆದುಹೋಗಿದ್ದ ಸರವೇ ಅದುವೇ ಎಂಬುದು ಖಚಿತವಾಯಿತು.