ಹೊಸಕೋಟೆ: ತಾಲೂಕು ನಂದಗುಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯ ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಬೆಂಗಳೂರು ಮೂಲದ ಲೋಹಿತ್ (36) ಎಂಬುವರು ಕೆಲಸಗಾರರಿಗೆ ಸಂಬಳ ಕೊಡಲು ಕಾರಿನಲ್ಲಿ ಹಣ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.28ರಂದು ಸಂಬಳ ಸಲುವಾಗಿ ಹಣದೊಂದಿಗೆ ಬೆಂಗಳೂರಿನಿಂದ ನಂದಗುಡಿ ಯತ್ತ ಬರುತ್ತಿರುವಾಗ ನಾಪತ್ತೆ ಯಾಗಿದ್ದಾರೆ. ನಂದಗುಡಿಯ ಅರಣ್ಯದ ಬಳಿ ರಸ್ತೆಯ ಬದಿ ಕಾರು ಪಂಕ್ಚರ್ ಆಗಿದ್ದು, ಚಕ್ರ ಬದಲಿಸಿಕೊಂಡು ನಂದ ಗುಡಿಗೆ ಹೋಗಿ ಬರಲು ತಡವಾಗುತ್ತದೆ ಎಂದು ಲೋಹಿತ್ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಇತ್ತ ಹಳೇಊರು ರೇಸ್ ಟ್ರ್ಯಾಕ್ ಉಸ್ತುವಾರಿ ವಹಿಸಿಕೊಂಡಿದ್ದ ತಮ್ಮ ಕೆಲಸಗಾರ ನಿತಿನ್ ಲೋಹಿತ್‌ಗೆ ಕರೆ ಮಾಡಿದಾಗ ಕಾರು ಟಯರ್ ಚೇಂಜ್ ಮಾಡುತ್ತಿದ್ದು, ಬರುವುದಾಗಿ ತಿಳಿಸಿದ್ದಾರೆ.
ಕರೆ ಬಂದ ಅರ್ಧ ಗಂಟೆ ನಂತರ ಮತ್ತೆ ನಿತಿನ್ ಲೋಹಿತ್‌ಗೆ ಕರೆ ಮಾಡಿ ದಾಗ ಫೋನ್ ಸ್ವೀಚ್ ಆಫ್ ಆಗಿತ್ತು. 29ರಂದು ಬೆಳಗ್ಗೆ ನಿತಿನ್ ಕಾರು ನಿಂತ ಜಾಗಕ್ಕೆ ಹೋದಾಗ, ಕಾರು ಟಯರ್ ಬಿಚ್ಚಿದ್ದು, ಕಾರಿ ನೊಳಗಡೆ ರಕ್ತದ ಕಲೆಗಳು ಕಂಡು ಬಂದಿದ್ದು ಚಪ್ಪಲಿ, ಬೆಲ್ಟ್ ಬಿದ್ದಿದ್ದು, ಹಾಗೂ ಎಳೆದಾಡಿರುವ ಗುರುತುಗಳು ಪತ್ತೆಯಾಗಿದೆ.
ಕಾರಿನಲ್ಲಿದ್ದ ಲೋಹಿತ್ ಸುಳಿವು ಇರದೇ ಇದ್ದುದನ್ನು ಕಂಡು ನಂದ ಗುಡಿ ಪೊಲೀಸರಿಗೆ ಕರೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 29 ರಂದು ಬೆಂಗಳೂರು ಕೆ.ಪಿ. ಅಗ್ರಹಾರದ ವಾಸಿ ಅಭಿನಾಗ್ ಎಂಬುವರು ನಂದಗುಡಿ ಪೊಲೀಸ್ ಠಾಣೆಯಲ್ಲಿ ನಮ್ಮ ಬಾವಾ ಕಾಣೆಯಾಗಿದ್ದಾರೆಂದು ದೂರು ದಾಖಲಿಸಿದ್ದಾರೆ.
ಸುದ್ದಿ ತಿಳಿದ ಸ್ಥಳಕ್ಕೆ ಧಾವಿಸಿದ ನಂದಗುಡಿ ಪೊಲೀಸರು ಕಾರನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಳಸಿ ತನಿಖೆ ನಡೆಸಿದರೂ ಡ್ರೋನ್ ಕ್ಯಾಮರಾ ಬಳಸಿ ಅರಣ್ಯವನ್ನೆಲ್ಲಾ ಸುತ್ತಾಡಿದರೂ ಸಹ ನಾಪತ್ತೆಯಾಗಿರುವ ಲೋಹಿತ್ ಸುಳಿವು ಸಿಕ್ಕಿಲ್ಲ.
ಬೆಂಗಳೂರು ಮೂಲದ ಲೋಹಿತ್ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದ ಕೆ.ಪಿ. ಅಗ್ರಹಾರದ ನಿವಾಸಿಯಾಗಿದ್ದು, ಇವರ ಪತ್ನಿ ಐಶ್ವರ್ಯ ಬಿಬಿಎಂಪಿ ಹಾಲಿ ಸದಸ್ಯೆಯಾಗಿದ್ದಾರೆ. ಈ ಪ್ರಕರಣ ವನ್ನು ಭೇದಿಸಲು ಡಿವೈಎಸ್‌ಪಿ ಉಮಾಶಂಕರ್ ನೇತೃತ್ವದ ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಪಿಎಸ್ಐ ಶಂಕರಪ್ಪ ತಿಳಿಸಿದ್ದಾರೆ.