Advertisement

ಕಾಡುವ ಕಥೆ ನೋಡುವ ಸಮಯ

12:30 AM Mar 15, 2019 | |

ನೈಜ ಘಟನೆಯನ್ನಾಧರಿಸಿ ಬರುತ್ತಿರುವ “ಮಿಸ್ಸಿಂಗ್‌ ಬಾಯ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಸುದೀಪ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ರಘುರಾಮ್‌ ನಿರ್ದೇಶಿಸುತ್ತಿದ್ದಾರೆ. ಅಂದು ಕಾರ್ಯಕ್ರಮಕ್ಕೆ ಸುದೀಪ್‌ ಅತಿಥಿಯಾಗಿ ಬರಲು ಕಾರಣ, ರಘುರಾಮ್‌ ಮಾಡಿದ ಸಹಾಯವಂತೆ. ಅದು ಸುದೀಪ್‌ ಅವರ “ಮೈ ಆಟೋಗ್ರಾಫ್’ ಚಿತ್ರಕ್ಕೆ ಒಳ್ಳೆಯ ಸ್ಯಾಟ್‌ಲೆçಟ್‌ ಬೆಲೆ ಕೊಡಿಸಿದ್ದು. ಆಗ ವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಘುರಾಮ್‌, ಸುದೀಪ್‌ ಅವರ ಸಿನಿಮಾಕ್ಕೆ ಒಳ್ಳೆಯ ಬೆಲೆ ಕೊಡಿಸುವ ಮೂಲಕ ಆ ಸಮಯದಲ್ಲಿ ಸಹಾಯಕ್ಕೆ ಬಂದರಂತೆ. ಅದನ್ನು ತಾನು ಯಾವತ್ತಿಗೂ ಮರೆಯಲ್ಲ ಎನ್ನುತ್ತಾ, “ಮಿಸ್ಸಿಂಗ್‌ ಬಾಯ್‌’ಗೆ ಶುಭಕೋರಿದರು. “ನನಗೆ ಈ ಸಿನಿಮಾದ ಕಥೆ ಬಗ್ಗೆ ಗೊತ್ತಿಲ್ಲ. ಆದರೆ, ಟ್ರೇಲರ್‌ ತುಂಬಾ ಚೆನ್ನಾಗಿದೆ. ಇವತ್ತು ಕಂಟೆಂಟ್‌ ಸಿನಿಮಾಗಳು ಚೆನ್ನಾಗಿ ಹೋಗುತ್ತವೆ. ಕಂಟೆಂಟ್‌ ಸಿನಿಮಾಗಳ ಮುಂದೆ ಸ್ಟಾರ್‌ಡಮ್‌ ಕೂಡಾ ಅಲ್ಲಾಡ್ತಾ ಇದೆ. ಇದು ಕೂಡಾ ಕಂಟೆಂಟ್‌ ಸಿನಿಮಾ ಎಂದು ಕೇಳಿ ಖುಷಿಯಾಯಿತು’ ಎಂದರು ಸುದೀಪ್‌.

Advertisement

ನಿರ್ದೇಶಕ ರಘುರಾಮ್‌ ಕೊಂಚ ಭಾವುಕರಾಗಿದ್ದರು. ಏಕೆಂದರೆ ಈ ಚಿತ್ರದ ಚಿತ್ರೀಕರಣ ಸಮಯದಲ್ಲಿ ರಘುರಾಮ್‌ ಅವರ ತಾಯಿ ತೀರಿಕೊಂಡರಂತೆ. ಈ ಸಿನಿಮಾದ ಕಥೆ ಕೂಡಾ ತಾಯಿಯನ್ನು ಹುಡುಕಿಕೊಂಡು ಬರುವ ಮಗನದ್ದು. “ಈ ಸಿನಿಮಾ ಮೂಲಕ ನನ್ನ ತಾಯಿಯನ್ನು ನೋಡುತ್ತೇನೆ. ನಾನು ತುಂಬಾ ಖುಷಿಪಟ್ಟು ಮಾಡಿದ ಸಿನಿಮಾವಿದು. ಈ ಸಿನಿಮಾ ನಂತರ ನಾನು ಮುಂದೆ ಸಿನಿಮಾ ಮಾಡುತ್ತೇನೋ, ಬಿಡುತ್ತೇನೋ. ಆದರೆ, ಈ ಕಥೆಯಂತೂ ನನಗೆ ತೃಪ್ತಿ ಕೊಟ್ಟಿದೆ’ ಎಂದರು. ಚಿತ್ರದ ಪ್ರಮೋಶನ್‌ಗಾಗಿ, ಕ್ಯೂಆರ್‌ ಕೋಡ್‌ ಎಂಬ ತಂತ್ರಜ್ಞಾನವನ್ನು ಬಳಸಿದ್ದು, ಆ ಮೂಲಕ ಸಿನಿಮಾದ ಎಲ್ಲಾ ವಿವರಗಳನ್ನು ನೋಡಬಹುದು ಎಂದು ಮಾಹಿತಿ ನೀಡಿದರು ರಘು. ಚಿತ್ರವನ್ನು ಕೊಲ್ಲ ಪ್ರವೀಣ್‌ ನಿರ್ಮಿಸಿದ್ದು, ಅವರಿಗೆ ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿದ ಖುಷಿ ಇದೆ. ಚಿತ್ರದಲ್ಲಿ ಗುರುನಂದನ್‌ ನಾಯಕರಾಗಿ ನಟಿಸಿದ್ದಾರೆ. “ತಾಯಿಯನ್ನು ಹುಡುಕಿಕೊಂಡು ಬರುವ ಮಗನ ಘಟನೆಯನ್ನು ನಾನು ಕೇಳಿದ್ದೆ. ಆದರೆ, ಆ ಕಥೆಯೇ ನನಗೆ ಸಿನಿಮಾವಾಗಿ ಸಿಕ್ಕಿದೆ. ನನ್ನನ್ನು ತುಂಬಾ ಕಾಡಿದ ಕಥೆ’ ಎಂದರು. ನಾಯಕಿ ಅರ್ಚನಾ ಜಯಕೃಷ್ಣ, ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ರವಿಶಂಕರ್‌ ಗೌಡ ಹಾಗೂ ರಂಗಾಯಣ ರಘು ಕೂಡಾ ತಮ್ಮ ಅನುಭವ ಹಂಚಿಕೊಂಡರು. ರಂಗಾಯಣ ರಘು ಅವರು ಇಲ್ಲಿ ಪೊಲೀಸ್‌ ಆಫೀಸರ್‌ ಆಗಿ ನಟಿಸಿದ್ದಾರೆ. ಅಂದಹಾಗೆ, ಚಿತ್ರ ಮಾರ್ಚ್‌ 22 ರಂದು ತೆರೆಕಾಣಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next