Advertisement

“ಮಿಸ್ಸಿಂಗ್‌ ಬಾಯ್‌’ಭಾವುಕ ಸಿನಿಮಾ

05:41 AM Mar 19, 2019 | |

ಸಕ್ಸಸ್‌ ಸಿನಿಮಾ ಮೂಲಕ ಗುರುತಿಸಿಕೊಂಡ ನಟ ಗುರುನಂದನ್‌ ಇದೀಗ ಮತ್ತೂಂದು ಸಕ್ಸಸ್‌ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ರಿಯಲ್‌ ಸ್ಟೋರಿಯೊಂದರ ಡಾಕ್ಯುಮೆಂಟರಿ ನೋಡಿದ್ದ ಗುರುನಂದನ್‌, ಮುಂದೊಂದು ದಿನ ಈ ರಿಯಲ್‌ ಸ್ಟೋರಿ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಆದರೆ, ಅದು ಅವರ ಪಾಲಿಗೇ ಬರುತ್ತೆ ಅಂದುಕೊಂಡಿರಲಿಲ್ಲ. ಈಗ ಆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಅದು “ಮಿಸ್ಸಿಂಗ್‌ ಬಾಯ್‌’. ಆ ಸಿನಿಮಾ ಕುರಿತು ಗುರುನಂದನ್‌ ಮಾತನಾಡಿದ್ದಾರೆ.

Advertisement

* “ಮಿಸ್ಸಿಂಗ್‌ ಬಾಯ್‌’ ಅನುಭವ ಹೇಗಿತ್ತು?
ಈ ಕಥೆ ಶುರುವಾಗಿದ್ದು ದೊಡ್ಡ ಅನುಭವ. ರಿಯಲ್‌ ಸ್ಟೋರಿ ಎಂದು ಗೊತ್ತಿತ್ತು. ಅದನ್ನೂ ಡಾಕ್ಯುಮೆಂಟರಿಯಲ್ಲಿ ನೋಡಿದ್ದೆ. ಸಿನಿಮಾ ಮಾಡಬಹುದು ಅಂದುಕೊಂಡಿದ್ದೆ. ಆಗಿರಲಿಲ್ಲ. ಸದಾ ಕಥೆ ಕಾಡುತ್ತಲೇ ಇತ್ತು. ರಘುರಾಮ್‌ ಅವರ ಜೊತೆ ಚರ್ಚಿಸಿದ್ದೆ. ಅವರೂ ಸಹ ಅದಾಗಲೇ ಆ ಲೈನ್‌ ಇಟ್ಟುಕೊಂಡು ಸ್ಕ್ರಿಪ್ಟ್ ಕೂಡ ಮಾಡಿದ್ದರು. ಕೊಲ್ಲ ಪ್ರವೀಣ್‌ ಬಳಿ ಹೇಳುತ್ತಿದ್ದಂತೆಯೇ ಒಂದೇ ಗಂಟೆಯಲ್ಲಿ ಎಲ್ಲವೂ ಓಕೆ ಆಗಿ, ಸಿನಿಮಾ ಕೂಡ ಮುಗಿದು ಹೋಗಿದೆ. ಇದೊಂದು ಒಳ್ಳೆಯ ಅನುಭವ ಕೊಟ್ಟ ಚಿತ್ರ. ನನ್ನ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಚಿತ್ರ.

ಹಿಂದೆಲ್ಲಾ ಕಾಮಿಡಿ ಜಾನರ್‌ ಇತ್ತು. ಇಲ್ಲಿ ಗಂಭೀರ ಪಾತ್ರವಿದೆ. 30 ವರ್ಷಗಳ ಹಿಂದೆ ರೈಲ್ವೆ ಸ್ಟೇಷನ್‌ನಿಂದ ಕಳೆದು ಹೋದ ಹುಡುಗ ಸ್ವೀಡನ್‌ ದೇಶ ಸೇರಿ, ಅಲ್ಲಿ ಮಿಲೇನಿಯರ್‌ ಆಗಿ, ಕೊನೆಗೆ ತನ್ನ ರಿಯಲ್‌ ತಾಯಿಯನ್ನು ಆ ದೇಶದಿಂದ ಇಂಡಿಯಾಗೆ ಹುಡುಕಿ ಬರುವ ಪಾತ್ರ ಹೊಸ ಅನುಭವ ಕೊಟ್ಟಿದೆ. ಎಲ್ಲರಿಗೂ ತಾಯಿ ಫೀಲ್‌ ಒಂದೇ. ನನಗೆ ನಿಜಕ್ಕೂ ಅದು ನಟನೆ ಅನಿಸಲೇ ಇಲ್ಲ. ನಿಜವಾಗಿಯೂ ನನ್ನ ತಾಯಿ ನೋಡೋಕೆ ಹೋಗ್ತಾ ಇದೀನಾ ಎಂಬ ಫೀಲ್‌ ಆಗಿತ್ತು. ಒಬ್ಬ ತಾಯಿ ಮಗನ ಕಳೆದುಕೊಂಡ ಫೀಲು, ಮಗ ತಾಯಿ ಕಳೆದುಕೊಂಡ ಫೀಲು ಎರಡೂ ಅದ್ಭುತ ಅನುಭವದ ಚಿತ್ರಣ.

* ಪಾತ್ರ ಹೇಗನಿಸಿತು?
30 ವರ್ಷಳ ಹಿಂದೆ ಆಕಾಶವಾಣಿ, ದೂರದರ್ಶನ ಬಿಟ್ಟರೆ ಈಗಿನಂತೆ ಸೋಷಿಯಲ್‌ ಮೀಡಿಯಾಗಳಿರಲಿಲ್ಲ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ ಇರಲಿಲ್ಲ. ಅಂಥದ್ದೊಂದು ಪಾತ್ರ ಕಟ್ಟಿಕೊಡಬೇಕೆಂದರೆ, ತಯಾರಿ ಬೇಕಿತ್ತು. ಆ ಪಾತ್ರ ಒಂದು ರೀತಿಯ ಭಾವುಕತೆ ಹೆಚ್ಚಿಸುವಂಥದ್ದು. ತಾಯಿ ಕಳೆದುಕೊಂಡು ದೂರದ ದೇಶಕ್ಕೆ ಹೋದವನು ಪುನಃ ಬಂದಾಗ, ಇಲ್ಲಿ ಭಾಷೆ ಸಮಸ್ಯೆ. ಅದನ್ನು ನೀಟ್‌ ಆಗಿ ನಿರ್ವಹಿಸುವಾಗ ಹೊಸ ಅನುಭವ ಸಿಕ್ಕಿತು. ರಿಯಲ್‌ ವಿಡಿಯೋ ನೋಡಿದಾಗ ಭಾವುಕನಾಗಿದ್ದೆ. ಸಿನಿಮಾ ಮಾಡುವಾಗ, ಎಷ್ಟೋ ಸೀನ್‌ಗಳಲ್ಲಿ ಅತ್ತಿದ್ದೂ ಹೌದು. ಆ ಪಾತ್ರ ಮರೆಯಲು ಸಾಧ್ಯವೇ ಇಲ್ಲ.

* ನಿಮಗಿಲ್ಲಿ  ತುಂಬಾ ಕಾಡಿದ್ದೇನು?
ಬೆಂಗಳೂರಿಗೆ ಬಂದಿಳಿಯುವ ದೃಶ್ಯ ತುಂಬಾ ಕಾಡಿತು. ಅನಾಥಾಶ್ರಮ ನೆನಪಾಗುವಾಗ, ತನ್ನ ಊರಿನ ಬಗ್ಗೆ ಚೂರು ಚೂರು ನೆನಪು ಮಾಡಿಕೊಳ್ಳುವ ಸೀನ್‌ ಖುಷಿ ಕೊಟ್ಟಿತು. ಇಂದಿರಾ ನಗರ ಬಳಿಯ ಅನಾಥಾಶ್ರಮದ ಹಳೆಯ ಬಿಲ್ಡಿಂಗ್‌ನಲ್ಲಿ ಆ ದೃಶ್ಯ ಚಿತ್ರೀಕರಿಸುವ ಸಂದರ್ಭ ಮತ್ತು ತಾಯಿಯನ್ನು ಭೇಟಿ ಮಾಡುವ ಸಂದರ್ಭ ನಿಜಕ್ಕೂ ಮರೆಯದ ದೃಶ್ಯಗಳು. ಸಿನಿಮಾದುದ್ದಕ್ಕೂ ಅಂತಹ ಅನೇಕ ಕಾಡುವ ಅಂಶಗಳಿವೆ.

Advertisement

* ತಾಯಿ ಭೇಟಿ ಮಾಡುವ ಸಂದರ್ಭದ ಬಗ್ಗೆ ಹೇಳಿ?
ಕೊನೆಯ ಇಪ್ಪತ್ತು ನಿಮಿಷ ಸಿನಿಮಾ ನೋಡುಗರನ್ನು ಭಾವುಕರನ್ನಾಗಿಸುವುದು ನಿಜ. ವಿದೇಶದಿಂದ ಬಂದ ಮಗನನ್ನು ಆ ತಾಯಿ ಅವನು ತನ್ನ ಮಗ ಎಂದು ಸಾಬೀತುಪಡಿಸುವ ದೃಶ್ಯ ಮನಕಲಕುವಂತಿದೆ. ಆ ಸಂದರ್ಭ ಅಲ್ಲೊಂದು ಜಾತ್ರೆ ನಡೆಯುತ್ತಿತ್ತು. ಆ ನಡುವೆಯೇ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ತಾಯಿ ಮಗನ ಭೇಟಿ ಮಾಡುವ ದೃಶ್ಯ ಸಿನಿಮಾದ ಹೈಲೈಟ್‌.

* ಮೂಲ ಘಟನೆಯ ಅಪ್ಪ, ಅಮ್ಮನ ಭೇಟಿಯಾಗಿದ್ದೀರಾ?
ಹೌದು, ಹುಬ್ಬಳ್ಳಿಯ ಸ್ಲಂವೊಂದರಲ್ಲಿ ಆ ಕುಟುಂಬ ಇದೆ. ಆ ತಾಯಿಗೆ ವಯಸ್ಸಾಗಿದೆ. ನಾವು ಹೋಗಿ ಭೇಟಿ ಮಾಡಿ, ಒಂದಷ್ಟು ಮಾಹಿತಿ ಕಲೆಹಾಕಿ ಬಂದಿದ್ದೆವು. ಆದರೆ, ರಿಯಲ್‌ ಮಗನನ್ನು ಭೇಟಿ ಮಾಡಲಾಗಿಲ್ಲ. ಅವನು ಇಲ್ಲಿಯವರೆಗೆ ಮೂರ್‍ನಾಲ್ಕು ಸಲ ಬಂದು ಹೋಗಿದ್ದಾನಂತೆ. ನಾವೂ ಅವನನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದೇವೆ. ಸಾಧ್ಯವಾಗಿಲ್ಲ. ಸಿಕ್ಕರೆ, ಖಂಡಿತ ಈ ಚಿತ್ರ ತೋರಿಸುತ್ತೇವೆ.

* ಪ್ರೇಕ್ಷಕರಿಗೆ ಏನು ಹೇಳುತ್ತೀರಿ?
ಹಂಡ್ರೆಡ್‌ ಪರ್ಸೆಂಟ್‌ ಚಿತ್ರ ನೋಡುಗರನ್ನು ಭಾವುಕತೆಗೆ ದೂಡುತ್ತದೆ ಎಂಬ ಗ್ಯಾರಂಟಿ ಕೊಡ್ತೀನಿ. ಯಾಕೆಂದೆ, ಭಾವನೆ ಎಂಬುದು ಎಲ್ಲರಿಗೂ ಒಂದೇ. ಅವನು ರೌಡಿ ಇರಲಿ, ಡಾನ್‌ ಇರಲಿ, ಅವನಿಗೂ ತಾಯಿ ಎಂಬ ಭಾವನೆ ಇರುತ್ತೆ. ಅವರಲ್ಲೂ ಫೀಲಿಂಗ್ಸ್‌ ಇರುತ್ತೆ. ಎಮೋಷನ್ಸ್‌ ಇಲ್ಲಿ ಹೆಚ್ಚಾಗಿದೆ. ಹಾಗಾಗಿ ಜನರು ಕಣ್ಣು ಒದ್ದೆ ಮಾಡಿಕೊಳ್ತಾರೆ ಎಂಬುದನ್ನು ಹೇಳಬಲ್ಲೆ. ಕಮರ್ಷಿಯಲ್‌ ಚಿತ್ರ ಬರುತ್ತಲೇ ಇರುತ್ತವೆ. ಇಂತಹ ಚಿತ್ರಗಳು ಅಪರೂಪ. ಹಾಗಾಗಿ ಜನರು ಮಿಸ್‌ ಮಾಡದೆ “ಮಿಸ್ಸಿಂಗ್‌ ಬಾಯ್‌’ ನೋಡಬೇಕು ಎಂಬುದು ನನ್ನ ಮನವಿ.

Advertisement

Udayavani is now on Telegram. Click here to join our channel and stay updated with the latest news.

Next