ರಬಕವಿ-ಬನಹಟ್ಟಿ : ಕಳೆದ ಶನಿವಾರ ಕಾಣೆಯಾದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಮಲ್ಲಪ್ಪ ಸಗರಿ(60) ಎಂಬ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಯೇ ಸಾವಿಗೀಡಾದ ವ್ಯಕ್ತಿಯಾಗಿದ್ದಾನೆ. 11 ರಂದು ಮನೆಯಿಂದ ಹೊರಹೋಗಿದ್ದು ಎಲ್ಲಿಯೂ ಸಿಕ್ಕಿಲ್ಲವೆಂದು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಬೆಳಗ್ಗೆ ಅವರ ತೋಟದ ಮುಂದಿನ ಭಾಗದ ಕಬ್ಬಿನ ಪಡದಲ್ಲಿ ಕೊಳೆತ ವಾಸನೆ ಬರುತ್ತಿದ್ದ ಹಿನ್ನಲೆ ಪರಿಶೀಲಿಸಿದಾಗ ಬೆತ್ತಲೆ ಮೃತದೇಹ ಪತ್ತೆಯಾಗಿದೆ. ಮೃತ ಮಾನಸಿಕ ವ್ಯಕ್ತಿ ಮಲ್ಲಪ್ಪನು ಬಹಿರ್ದೆಸೆಗೆಂದು ತೆರಳಿದಾಗ ಅಲ್ಲಿಯೇ ಮೂರ್ಛೆ ರೋಗದಿಂದ ಬಳಲಿ ಸಾವಿಗೀಡಾಗಿರಬಹುದೆಂಬ ಸಂಶಯ ಪೊಲೀಸ್ ಮೂಲಗಳದ್ದಾಗಿದೆ.
ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಸುರೇಶ ಮಂಟೂರ, ಕ್ರೈಮ್ ಪಿಎಸ್‌ಐ ಪುರಂದರ ಪೂಜಾರಿ ತನಿಖೆ ಮುಂದುವರೆಸಿದ್ದಾರೆ.