Advertisement

ರಫೇಲ್ ಒಪ್ಪಂದ ರಾಜಕೀಯಗೊಳಿಸುವುದಕ್ಕಾಗಿ ತಪ್ಪು ಮಾಹಿತಿ ಹರಡಿದೆ: ಪ್ರಧಾನಿ ಮೋದಿ

07:35 PM Feb 06, 2023 | Team Udayavani |

ತುಮಕೂರು : ಸೋಮವಾರ ಕರ್ನಾಟಕದ ತುಮಕೂರಿನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಒಪ್ಪಂದದ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Advertisement

“ಹೆಚ್‌ಎಎಲ್ ಬಗ್ಗೆ ತಪ್ಪು ಮಾಹಿತಿ ಹರಡಲಾಗಿದೆ ಮತ್ತು ನಮ್ಮ ಸರ್ಕಾರದ ವಿರುದ್ಧ ಅನೇಕ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಸಂಸತ್ತಿನ ಹಲವು ಕೆಲಸದ ಸಮಯ ವ್ಯರ್ಥವಾಯಿತು, ಎಚ್‌ಎಎಲ್‌ನ ಹೆಲಿಕಾಪ್ಟರ್ ಕಾರ್ಖಾನೆ ಮತ್ತು ಅದರ ಶಕ್ತಿಯು ಸುಳ್ಳು ಆರೋಪಗಳನ್ನು ಹೊರಿಸಿದವರನ್ನು ಅನಾವರಣಗೊಳಿಸುತ್ತದೆ ಎಂದು ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

“ಈ ಕಾರ್ಖಾನೆಯು ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರವಾಗಿದೆ. ಸತ್ಯವು ಇಂದು ಬಹಿರಂಗವಾಗುತ್ತಿದೆ” ಎಂದರು, ಹೆಚ್‌ಎಎಲ್ ನ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆಯು ರಕ್ಷಣಾ ಕ್ಷೇತ್ರದಲ್ಲಿ ಭಾರತದ ‘ಆತ್ಮನಿರ್ಭರತೆ’ (ಸ್ವಾವಲಂಬನೆ) ಅನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಖರೀದಿ ವೆಚ್ಚವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು, ಬಿಜೆಪಿಯು ಯುಪಿಎ ಸರ್ಕಾರದ ಒಪ್ಪಂದಕ್ಕಿಂತ ದುಪ್ಪಟ್ಟು ವೆಚ್ಚದಲ್ಲಿ ಯುದ್ಧವಿಮಾನಗಳನ್ನು ಖರೀದಿಸಿದೆ ಎಂದು ಆರೋಪ ಮಾಡಲಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರಕಾರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿ, ಹಿಂದಿನ ಕಾಂಗ್ರೆಸ್ ನೇತೃತ್ವದ ಆಡಳಿತವು 526 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದ್ದರೆ ಪ್ರತಿ ಜೆಟ್ ಅನ್ನು 1,670 ಕೋಟಿ ರೂಪಾಯಿ ವೆಚ್ಚದಲ್ಲಿ ಏಕೆ ಖರೀದಿಸಲಾಗಿದೆ ಎಂದು ಪ್ರಶ್ನಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next