Advertisement

ಮೂರು ಸಮಿತಿ ಪಠ್ಯದಲ್ಲೂ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ: ಸಾಣೇಹಳ್ಳಿ ಶ್ರೀ

01:56 PM Jun 22, 2022 | Team Udayavani |

ಬೆಂಗಳೂರು : ಬಸವೇಶ್ವರರ ಬಗ್ಗೆ ಮಾತ್ರವಲ್ಲ, ಕುವೆಂಪು, ಅಂಬೇಡ್ಕರ್ ಸೇರಿದಂತೆ ಮಹನೀಯರ ವಿಚಾರದಲ್ಲಿ ಆದ ತಪ್ಪುಗಳನ್ನು ಸರಕಾರ ಬಗೆಹರಿಸುತ್ತದೆ ಎಂಬ ವಿಶ್ವಾಸವಿದೆ. ಬಸವೇಶ್ವರರ ಬಗ್ಗೆ ಮೂರು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲೂ ದೋಷಗಳು ಇವೆ ಎಂದು ಸಾಣೇಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಸಂಬಂಧ ” ಉದಯವಾಣಿ” ಜತೆ ಮಾತನಾಡಿದ ಅವರು, ಮೂರು ಸಮಿತಿಯ ಪಠ್ಯದಲ್ಲೂ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ‌ ಇದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಷ್ಕರಣೆಯಾಗಬೇಕು. ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿ ಹಾಗೂ ನಾವು ಸಮಗ್ರವಾಗಿ ಚರ್ಚಿಸಿ ಎರಡು ಲೇಖನ ಬರೆದಿದ್ದೇವೆ.‌ಈ ಪೈಕಿ ಯಾವುದನ್ನು ಬೇಕಾದರೂ ಪರಿಶೀಲಿಸಬಹುದು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಇಂದು ಸಂಜೆ ಸಭೆ ಇದೆ. ಸಕಾರಾತ್ಮಕ ನಿರ್ಣಯ ಹೊರಬರುತ್ತದೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ಹಾಗೆ ನೋಡಿದರೆ ಬರಗೂರು ಸಮಿತಿ ವರದಿಯಲ್ಲಿ ಕಡಿಮೆ ಲೋಪಗಳು ಇವೆ. ಆದರೆ ಶೈವ ಗುರುಗಳಿಂದ ದೀಕ್ಷೆ ಪಡೆದರು, ವೀರಶೈವ ಧರ್ಮ ಪುನರುತ್ಥಾನ ಮಾಡಿದರು ಎಂದು ಬರಗೂರು ಪಠ್ಯದಲ್ಲಿ ಉಲ್ಲೇಖವಾಗಿದೆ.‌ ಇದು ನಮಗೆ ಒಪ್ಪಿತವಾಗಿಲ್ಲ. ನೀವು ಪೂರ್ವದಲ್ಲೇ ಈ ಬಗ್ಗೆ ಪ್ರಶ್ನೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ನಾವು ಅದನ್ನು ಓದಿರಲಿಲ್ಲ.‌ಕೆಲವೊಮ್ಮೆ ಗಂಭೀರ ದೋಷಗಳು ಆಗದೇ ಇದ್ದಾಗ ಚರ್ಚೆಗಳು ನಡೆಯುವುದಿಲ್ಲ. ಆದರೆ ರೋಹಿತ್ ಚಕ್ರ ತೀರ್ಥ ಸಮಿತಿ ಪಠ್ಯದಲ್ಲಿ ಬಸವಣ್ಣನವರ ಜತೆಗೆ ಕುವೆಂಪು, ಅಂಬೇಡ್ಕರ್ ಸೇರಿದಂತೆ ಎಲ್ಲ ಸಮಾಜ ಸುಧಾರಕರ ಬಗ್ಗೆ ತಪ್ಪುಗಳಾಗಿದೆ. ಇದನ್ನು ಪರಿಹರಿಸಿ ಎಂದಿದ್ದೇನೆ. ಸಿಎಂ ಬೊಮ್ಮಾಯಿ ಹಾಗೂ ಸರಕಾರ ಸಕಾರಾತ್ಮಕವಾಗಿದೆ ಎಂದರು.

ಯಾವುದೇ ಪಠ್ಯದಲ್ಲೂ ಮಹನೀಯರ ವ್ಯಕ್ತಿತ್ವಕ್ಕೆ ದೋಷಗಳು ಆಗಬಾರದು. ಪಠ್ಯ ಪರಿಷ್ಕರಣೆ ಮಾಡುವವರಿಗೆ ಅಗಾಧ ಜ್ಞಾನದ ಜತೆಗೆ ಸೂಕ್ಷ್ಮತೆ ಇರಬೇಕು. ಯಾವುದೇ ಪಕ್ಷ- ಪಂಗಡಕ್ಕೆ ಅಂಟಿಕೊಳ್ಳದೇ ನಿಷ್ಪಕ್ಷಪಾತವಾಗಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಬಸವೇಶ್ವರರ ಕುರಿತಾದ ಪಾಠ ಹೇಗಿರಬೇಕೆಂದು ಸಾಣೇಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು ಬರೆದಿರುವ ಪತ್ರ ಈಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಶ್ರೀಗಳು ನೀಡಿದ ಗಡವಿನೊಳಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಬಸವಣ್ಣನವರ ಪಠ್ಯದ ಆಯ್ಕೆಯ‌ ಜತೆಗೆ ಸಾಣೇಹಳ್ಳಿ ನೇತೃತ್ವದ ಸ್ವಾಮೀಜಿಗಳ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇದಕ್ಕೆ ಚುನಾವಣಾ ವರ್ಷದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸಿದ್ದವಾಗುವುದೇ  ಎಂಬ ಪ್ರಶ್ನೆ ಉದ್ಭವವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next