ಶ್ರೀನಿವಾಸಪುರ: ಆಂಧ್ರ ಮತ್ತು ಕರ್ನಾಟಕದ ಸಂಪರ್ಕದ ಪ್ರಮುಖ ರಸ್ತೆಯಾಗಿರುವ ಪುಂಗನೂರು ರಸ್ತೆಯಲ್ಲಿ ತಾಲೂಕಿನ ಕೊರ್ನೆಹಳ್ಳಿ ಸಮೀಪ ರಾಗಿ ಒಕ್ಕಣೆಯಿಂದ ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ.
ತಾಲೂಕಿನ ಮಾರ್ಗವಾಗಿ ಆಂಧ್ರಕ್ಕೆ ಸಂಪರ್ಕವಿರುವ ರಸ್ತೆಯಲ್ಲಿ ರಾಗಿ ಒಕ್ಕಣೆ ಕಂಡು ಬಂದಿದೆ. ಸದರಿ ರಸ್ತೆಯಲ್ಲಿ ಪಟ್ಟಣದಿಂದ ಆಂಧ್ರದ ಗಡಿಯಂಚಿನವರಿಗೆ ನೂರಾರು ಹಳ್ಳಿಗಳು ಇವೆ. ಈ ಎಲ್ಲಾ ಹಳ್ಳಿಗಳ ಜನ ಪಟ್ಟಣಕ್ಕೆ ಬರಬೇಕಾದರೆ ಈ ರಸ್ತೆ ಅವಲಂಬಿಸಿ ಬರಬೇಕಾಗಿದೆ.
ಜತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಅನಿವಾರ್ಯವಾಗಿ ಸದರಿ ರಸ್ತೆಯಲ್ಲಿ ಬೈಕ್‌ಗಳೊಂದಿಗೆ ಬರುತ್ತಾರೆ. ಆದರೆ, ರಸ್ತೆಯುದ್ದ ರಾಗಿ ಒಕ್ಕಣೆ ಕೆಲಸ ನಡೆಯುತ್ತಿದೆ. ಬಸ್, ಕಾರು ಒಕ್ಕಣೆ ಮಾಡುವ ಸ್ಥಳದಲ್ಲಿ ಸಂಚರಿಸಿದರೆ ದೂಳು ಹೊಗೆಯಂತೆ ರಸ್ತೆಯಲ್ಲಾ ಅವರಿಸಿಕೊಳ್ಳುತ್ತಿದೆ. ಇದರಿಂದಾಗಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಇದೇ ಕೊರ್ನೆಹಳ್ಳಿ ಸಮೀಪದಲ್ಲಿ ಕಾರಿಗೆ ರಾಗಿ ಹುಲ್ಲು ಸಿಕ್ಕಿಹಾಕಿಕೊಂಡು ಕಾರು ಸಂಪೂರ್ಣ ಸುಟ್ಟುಹೋಗಿತ್ತು.
ಇದನ್ನೂ ಓದಿ:ನುಗ್ಗೆ ಸೊಪ್ಪಿನ ಬೇಸಾಯದ ಬಗ್ಗೆ ಸಂಪೂರ್ಣ ಮಾಹಿತಿ
ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದರು. ಇಂತಹ ಘಟನೆಗಳು ನಡೆಯುವುದಕ್ಕೆ ಮುಂಚಿತವಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಂಡಲ್ಲಿ ಅಮಾಯಕರ ಪ್ರಾಣ ಹಾನಿ ತಪ್ಪಿಸಬಹುದಾಗಿದೆ ಎಂಬುದು ರಸ್ತೆಯಲ್ಲಿಸಂಚರಿಸುವ ಸವಾರರ ಅಭಿಪ್ರಾಯವಾಗಿದೆ.