Advertisement

ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್‌ ಕ್ರಿಕೆಟಿಗರ ದಯನೀಯ ನೋಟ

01:41 AM Aug 06, 2020 | Hari Prasad |

ಹೊಸದಿಲ್ಲಿ: ಭಾರತದ ಜೆರ್ಸಿ ಧರಿಸಿದ ಕ್ರಿಕೆಟಿಗರೆಲ್ಲರೂ ಸಿರಿವಂತರಲ್ಲ, ಸಿಲೆಬ್ರಿಟಿಗಳೂ ಅಲ್ಲ.

Advertisement

ಇವರು ಹೋದಲ್ಲೆಲ್ಲ ಮುತ್ತಿಗೆ ಹಾಕುವ, ಹಸ್ತಾಕ್ಷರ ಪಡೆಯುವ ಅಭಿಮಾನಿಗಳೂ ಇಲ್ಲ. ಕಾರಣ ಇವರೆಲ್ಲ ಭಾರತದ ವ್ಹೀಲ್‌ಚೇರ್‌ ಕ್ರಿಕೆಟಿಗರು!

ದೊಡ್ಡ ದುರಂತವೆಂದರೆ, ಭಾರತದ ಇತ್ತೀಚಿನ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ ಈ ಕ್ರಿಕೆಟಿಗರು ಇನ್ನೂ ಬಿಸಿಸಿಐ ವ್ಯಾಪ್ತಿಗೆ ಬರದಿರುವುದು!

ಮಂಡಳಿಯ ಮುಖ್ಯ ವಾಹಿನಿಯನ್ನು ಸೇರಬೇಕೆಂಬ ಕನಸು ಹೊತ್ತಿರುವ ಇವರು ಅಧ್ಯಕ್ಷ ಸೌರವ್‌ ಗಂಗೂಲಿ ಅವರತ್ತ ದಯನೀಯ ನೋಟ ಬೀರುತ್ತಿದ್ದಾರೆ.

ಚಿಂತಾಜನಕ ಸ್ಥಿತಿ
ಭಾರತದ ವ್ಹೀಲ್‌ಚೇರ್‌ ಕ್ರಿಕೆಟಿಗರ ಇಂದಿನ ಸ್ಥಿತಿ ನಿಜಕ್ಕೂ ಚಿಂತಾಜನಕ. ಪಂಜಾಬ್‌ನ ವಿಕೆಟ್‌ ಕೀಪರ್‌ – ಬ್ಯಾಟ್ಸ್‌ಮನ್‌ ನಿರ್ಮಲ್‌ ಸಿಂಗ್‌ ಧಿಲ್ಲಾನ್‌ ಹಾಲು ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ವೇಗಿ ಸಂತೋಷ್‌ ಪರಾಂಜಪೆ ಕೊಲ್ಹಾಪುರದಲ್ಲಿ ದ್ವಿಚಕ್ರ ವಾಹನ ವರ್ಕ್‌ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ಇವರಿಗೆ ರಾಜ್ಯ ಸರಕಾರದಿಂದ ಒಂದು ಸಾವಿರ ರೂ. ಮಾಸಿಕ ಪಿಂಚಣಿ ಬರುತ್ತಿದೆ. ಬ್ಯಾಟ್ಸ್‌ಮನ್‌ ಪೋಷಣ್‌ ಧ್ರುವ ರಾಯ್‌ಪುರದ ಗ್ರಾಮವೊಂದರ ವೆಲ್ಡಿಂಗ್‌ ಶಾಪ್‌ನಲ್ಲಿ ದಿನಗೂಲಿ ನೌಕರನಾಗಿದ್ದಾರೆ, ದಿನದ ಸಂಬಳ 150 ರೂ.
ಇವರೆಲ್ಲ ಭಾರತದ ಹೆಮ್ಮೆಯ ಕ್ರಿಕೆಟಿಗರು.

ಇವರ ಏಳಿಗೆಗಾಗಿ ಬಿಸಿಸಿಐ ಸಮಿತಿಯೊಂದನ್ನು ರೂಪಿಸಿ ಕಾರ್ಯಪ್ರವೃತ್ತವಾಗಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ ಲೋಧಾ ಸಮಿತಿ ಶಿಫಾರಸು ಮಾಡಿ ಎಷ್ಟೋ ಸಮಯವಾಯಿತು. ಆದರೆ ಬಿಸಿಸಿಐ ಇಂದಿಗೂ ಇದಕ್ಕೆ ಬೆಲೆ ಕೊಟ್ಟಿಲ್ಲ.

ಭರವಸೆ ಮಾತ್ರ
ಕೆಲವು ಸಮಯದ ಹಿಂದೆ ಭಾರತದ ವ್ಹೀಲ್‌ಚೇರ್‌ ಕ್ರಿಕೆಟ್‌ ಅಸೋಸಿಯೇನ್‌ ಸಿಇಒ ಸೋಮಜೀತ್‌ ಸಿಂಗ್‌ ಜತೆ ಮಾತುಕತೆ ನಡೆಸಿದ ಸೌರವ್‌ ಗಂಗೂಲಿ ಭರವಸೆಯನ್ನೇನೋ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ.

ಇಲ್ಲಿ ಸಂವಹನದ ಕೊರತೆ ಕಾಡುತ್ತಿದೆ ಎಂದು 24 ವರ್ಷದ, ಪ್ಯಾರಾಲಿಸಿಸ್‌ಗೆ ಒಳಗಾಗಿರುವ ಸೋಮಜೀತ್‌ ಹೇಳುತ್ತಾರೆ. ಈ ಕೋವಿಡ್‌-19 ಕಾಲದಲ್ಲಿ ವ್ಹೀಲ್‌ಚೇರ್‌ ಕ್ರಿಕೆಟಿಗರ ಬದುಕಿನ ಚಕ್ರವೇ ತಿರುಗುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next