ಲಕ್ನೋ: ಪ್ರಯಾಗ್ ರಾಜ್ ನ ಎಸ್ ಆರ್ ಎನ್ ಆಸ್ಪತ್ರೆಗೆ ದಾಖಲಾಗಿದ್ದ ಮಿರ್ಜಾಪುರದ ಯುವತಿ ಮೇಲೆ ಕೆಲವು ವೈದ್ಯರು ಸಾಮೂಹಿಕ
ಅತ್ಯಾಚಾರಕ್ಕೊಳಗಾಗಿದ್ದು, ಈಕೆ ಮಂಗಳವಾರ(ಜೂನ್ 09) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಕರುಳಿನ ಸಮಸ್ಯೆಯಿಂದ ಯುವತಿ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದಳು ಎಂದು ವರದಿ ಹೇಳಿದೆ.
ಇದನ್ನೂ ಓದಿ:ಮುಂಗಾರು ಅಬ್ಬರ…ಮುಂಬಯಿಯಲ್ಲಿ ಧಾರಾಕಾರ ಮಳೆ; ಟ್ರಾಫಿಕ್ ಜಾಮ್, ರೈಲು ಸಂಚಾರ ವ್ಯತ್ಯಯ
ಜೂನ್ 1ರಂದು ಯುವತಿಯನ್ನು ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದಿದ್ದು, ಈ ಸಂದರ್ಭದಲ್ಲಿ ವೈದ್ಯರ ತಂಡ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಯುವತಿ ಅಸ್ವಸ್ಥಗೊಂಡಿದ್ದು, ಆಪರೇಷನ್ ಥಿಯೇಟರ್ ನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ವಿಷಯದ ಟಿಪ್ಪಣಿ ಬರಹವನ್ನು ಸಹೋದರನಿಗೆ ನೀಡುವ ಮೂಲಕ ವಿಷಯ ಬಹಿರಂಗಗೊಂಡಿರುವುದಾಗಿ ವರದಿ ವಿವರಿಸಿದೆ.
“ಈ ವೈದ್ಯರು ಒಳ್ಳೆಯವರಲ್ಲ” ಎಂದು ನಡುಗುವ ಕೈಗಳಿಂದ ತುಂಡು ಕಾಗದದಲ್ಲಿ ಬರೆದು ಸಹೋದರನಿಗೆ ನೀಡಿದ್ದಳು. ಆಕೆಗೆ ಯಾವ ಚಿಕಿತ್ಸೆಯನ್ನೂ ನೀಡಿಲ್ಲ, ಏನೊ ನಡೆದಿದೆ ಎಂದು ಸಹೋದರ ಆರೋಪಿಸಿದ್ದ. ನಂತರ ಆಪರೇಷನ್ ಥಿಯೇಟರ್ ನಲ್ಲಿ ನಡೆದ ಘಟನೆಯ ಬಗ್ಗೆ ಸಹೋದರ ವಿಡಿಯೋ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಸತ್ಯೇಂದ್ರ ತಿವಾರಿ ಬಂದು ಸಂತ್ರಸ್ತೆಯ ತಾಯಿ ಮತ್ತು ಸಂಬಂಧಿಕರನ್ನು ಪ್ರಶ್ನಿಸಿದ್ದರು. ಆದರೆ ಕುಟುಂಬದ ಸದಸ್ಯರು ವೈದ್ಯರ ಮೇಲೆ ಯಾವುದೇ ಆರೋಪ ಹೊರಿಸಿಲ್ಲ ಎಂದು ತಿಳಿಸಿದ್ದಾರೆ. ಯುವತಿಗೆ ಪ್ರಜ್ಞೆ ಬಂದ ನಂತರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ವಾಪಸ್ ಬಂದಿದ್ದರು. ಆದರೆ ಅಷ್ಟರಲ್ಲಿ ಯುವತಿ ಸಾವಿಗೀಡಾಗಿದ್ದಾಳೆ ಎಂದು ವರದಿ ವಿವರಿಸಿದೆ.
ಯುವತಿ ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏತನ್ಮಧ್ಯೆ ಎಸ್ ಆರ್ ಎನ್ ಆಸ್ಪತ್ರೆಯ ವೈದ್ಯರ ವಿರುದ್ಧದ ಸಾಮೂಹಿಕ ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ಎರಡು ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ವರದಿ ತಿಳಿಸಿದೆ.