Advertisement

ಮೀರಾ-ಡಹಾಣೂ ಬಂಟ್ಸ್‌  :ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಸಮ್ಮಾನ

04:30 PM Jul 24, 2018 | Team Udayavani |

ಮುಂಬಯಿ: ಮೀರಾ-ಡಹಾಣೂ ಬಂಟ್ಸ್‌ ಇದರ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಮತ್ತು ಸಮ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜು. 21ರಂದು ಅಪರಾಹ್ನ ಮೀರಾರೋಡ್‌ ಪೂರ್ವದ ಸಾಯಿಬಾಯಿ ನಗರದ ಸೈಂಟ್‌ ಥೋಮಸ್‌ ಚರ್ಚ್‌ನ ಸಭಾಗೃಹದಲ್ಲಿ ಜರಗಿತು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಬದುಕು ಸಾಗಿಸುವ ಅನೇಕ ಕುಟುಂಬಗಳು ಬಂಟರ ಸಮಾಜದಲ್ಲಿದೆ. ಅವಕಾಶ ವಂಚಿತ ಪ್ರತಿಭೆಗಳು ವೇದಿಕೆಗಾಗಿ ಕಾಯುತ್ತಿದ್ದಾರೆ.  ದುಬಾರಿ ವೆಚ್ಚಗಳನ್ನು ಭರಿಸಲಾಗದೆ ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಕನಸು ಭಗ್ನಗೊಳ್ಳುತ್ತಿದೆ. ಇಂತಹ ಅಶಕ್ತ ಕುಟುಂಬಗಳನ್ನು ಗುರುತಿಸಿ ಅವರ ಶ್ರೇಯೋಭಿವೃದ್ಧಿಗೆ ದುಡಿಯುವುದು ನಮ್ಮ ಕರ್ತವ್ಯವಾಗಿದೆ. ಆಡಂಬರದ ಕಾರ್ಯಕ್ರಮಗಳನ್ನು ಸರಳಗೊಳಿಸಿ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ದತ್ತು ಸ್ವೀಕರಿಸಿ ಸುಕ್ಷಿತರನ್ನಾಗಿಸಿದರೆ ಕುಟುಂಬ, ಸಮಾಜ, ಊರು, ಸಂಘಟನೆ ಬಲಾಡ್ಯಗೊಳ್ಳುತ್ತದೆ ಎಂದರು.

ಸಮಾರಂಭದಲ್ಲಿ ಮೀರಾ-ಭಾಯಂದರ್‌ ನಗರ ಪಾಲಿಕೆಯಲ್ಲಿ ಸಭಾಪತಿಯಾಗಿ ನಿಯುಕ್ತಿಗೊಂಡ ನಗರ ಸೇವಕ ಹಾಗೂ ಮೀರಾ-ಡಹಾಣೂ ಬಂಟ್ಸ್‌ನ ಅಧ್ಯಕ್ಷ ಅರವಿಂದ ಎ. ಶೆಟ್ಟಿ ಇವರನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಸ್ಥಳೀಯ ಶಾಸಕ ನರೇಂದ್ರ ಎಲ್‌. ಮೆಹ್ತಾ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ನ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ, ಮೀರಾ-ಭಾಯಂದರ್‌ ವಲಯದ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಕಾಪು ಅವರು ಮಾತನಾಡಿದರು. ವಲಯದ ಗೌರವ ಕಾರ್ಯದರ್ಶಿ ಗುಣಕಾಂತ ಶೆಟ್ಟಿ ಕರ್ಜೆ ಸ್ವಾಗತಿಸಿದರು. ಮೀರಾ-ಡಹಾಣೂ ಬಂಟ್ಸ್‌ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಾಲಚಂದ್ರ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಬಾಬಾ ರಂಜನ್‌ ಶೆಟ್ಟಿ, ಪದಾಧಿಕಾರಿಗಳಾದ ಸುಜಾತಾ ಶೆಟ್ಟಿ, ಶುಭಾ ಎಸ್‌. ಶೆಟ್ಟಿ, ಪ್ರಿಯಾ ಆರ್‌. ಶೆಟ್ಟಿ, ಸುನೀತಾ ಶೆಟ್ಟಿ, ಸಂಪತ್‌ ಶೆಟ್ಟಿ, ಗಣೇಶ್‌ ಆಳ್ವ, ಮಂಜಯ್ಯ ಶೆಟ್ಟಿ, ರವೀಂದ್ರ ಶೆಟ್ಟಿ ಸೂಡಾ, ಜಗದೀಶ್‌ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ ಜರಗಿತು. ವಿವಿಧ ಸಮುದಾಯದ ಪ್ರತಿನಿಧಿಗಳು, ತುಳು-ಕನ್ನಡಪರ ಸಂಘಟನೆಗಳ ಪದಾಧಿಕಾರಿ ಗಳು, ಸಮಾಜದವರು ಪಾಲ್ಗೊಂಡಿದ್ದರು. 

Advertisement

ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಮಾರಂಭದ ಅಧ್ಯಕ್ಷ ಅರವಿಂದ್‌ ಎ. ಶೆಟ್ಟಿ ಅವರು, ವೇದಿಕೆಯಲ್ಲಿ ಭಾಷಣ ನೀಡುವುದು ಸುಲಭ. ಆದರೆ ಅನುಷ್ಠಾನಗೊಳಿಸುವುದು ಕಷ್ಟ ಸಾಧ್ಯ. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಹೇಳುವ ನಾವು ಅದನ್ನು ನಾವೆಷ್ಟು ಅನುಸರಿಸಿದ್ದೇವೆ ಎಂದು ತಿಳಿಯಬೇಕು. ಶಾಂತಿ, ಸಹಬಾಳ್ವೆಗೆ ಹೊಂದಾಣಿಕೆ ಅತ್ಯಗತ್ಯ ಎಂದರು.

ಚಿತ್ರ-ವರದಿ : ರಮೇಶ್‌ ಅಮೀನ್‌.

Advertisement

Udayavani is now on Telegram. Click here to join our channel and stay updated with the latest news.

Next