Advertisement

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅನುದಾನ ದುರ್ಬಳಕೆ: ಅರ್ಜಿ ವಜಾ

10:09 PM Nov 17, 2021 | Team Udayavani |

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕೌಶಲ ತರಬೇತಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕೋಟ್ಯಂತರ ರೂಪಾಯಿ ಅನುದಾನವನ್ನು ಅಲ್ -ಅಮೀನ್‌ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್‌ ಸಂಸ್ಥೆ ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈ ವಿಚಾರವಾಗಿ ಉಬೇದುಲ್ಲಾ ಶರೀಫ್ ಎಂಬುವರು ಸಲ್ಲಿಸಿದ್ದ ಸಾರ್ವಜನಿ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್‌. ಕುಮಾರ್‌ ವಾದ ಮಂಡಿಸಿ, ಅನುದಾನದ ದುರ್ಬಳಕೆ, ಯೋಜನೆಯ ಅನುಷ್ಠಾನದಲ್ಲಿ ಅವ್ಯವಹಾರ ಯಾವುದೂ ನಡೆದಿಲ್ಲ. ಮಾರ್ಗಸೂಚಿಗಳನ್ನು ಪಾಲಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಫ‌ಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಹೋಗಿದೆ. ಎಲ್ಲಾ ವಿವರಗಳು ಸಾರ್ವಜನಿಕವಾಗಿ ಲಭ್ಯ ಇದ್ದಾವೆ. ಅರ್ಜಿದಾರರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ:ಕೋಲಾರ ಬಂದ್‌ನಲ್ಲಿ ಪಾಲ್ಗೊಳ್ಳದಂತೆ ನೋಟಿಸ್ : ಮುತಾಲಿಕ್ ಕಿಡಿ

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಯೋಜನೆಯ ಅನುಷ್ಠಾನದಲ್ಲಿ ಅವ್ಯವಹಾರವಾಗಿದೆ, ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಮಯಾವಕಾಶ ನೀಡಿದರೆ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಸಿದ್ಧ ಎಂದರು.

Advertisement

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕಾಲ-ಕಾಲಕ್ಕೆ ಜಾರಿಗೆ ತಂದಿದೆ. ಆ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗಸೂಚಿಗಳನ್ನು ಸಹ ರೂಪಿಸಲಾಗಿರುತ್ತದೆ. ಮುಖ್ಯವಾಗಿ, ಅನುದಾನ ದುರ್ಬಳಕೆ ಆಗಿಲ್ಲ ಮತ್ತು ಅವ್ಯವಹಾರ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸುತ್ತಿದೆ. ಹೀಗಿರುವಾಗ, ನ್ಯಾಯಾಲಯ ಮಧ್ಯಪ್ರವೇಶಿಸುವ ಅಥವಾ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ನ್ಯಾಯಪೀಠ ಹೇಳಿತು.

ಒಂದೊಮ್ಮೆ ನಿರ್ದಿಷ್ಟವಾಗಿ ಯಾವುದಾದರೂ ಪ್ರಕರಣದಲ್ಲಿ ಅವ್ಯವಹಾರ ಅಥವಾ ಹಣದ ದುರ್ಬಳಕೆ ಬಗ್ಗೆ ಅರ್ಜಿದಾರರಿಗೆ ಅನುಮಾನವಿದ್ದರೆ ಅವರು ಲೋಕಾಯುಕ್ತ ಅಥವಾ ಕೇಂದ್ರ ವಿಚಕ್ಷಣ ಆಯುಕ್ತರಿಗೆ ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next