ಮಡಿಕೇರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಕ್ಷ ಆಡಳಿತ ಹಾಗೂ ಜನಪರ ಕಾಳಜಿಯೇ ಕಾರಣವಾಗಿದೆ. ಇವರ ಆಡಳಿತಾ ವಧಿಯಲ್ಲಿ ರಾಜ್ಯದ ಅಲ್ಪಸಂಖ್ಯಾಕರು ಅಭ್ಯುದಯವನ್ನು ಕಂಡಿದ್ದು, ಹಿಂದೆಂದೂ ಬಿಡುಗಡೆಯಾಗದಷ್ಟು ಅನುದಾನ ಅಲ್ಪಸಂಖ್ಯಾಕರ ಏಳಿಗೆಗಾಗಿ ಸರಕಾರ ನೀಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾಕರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಕೂಡ ಅಲ್ಪಸಂಖ್ಯಾಕರು ಸಾಕಷ್ಟು ಅಭಿವೃದ್ಧಿ ಯನ್ನು ಕಂಡಿದ್ದು, ಯುವ ಸಮೂಹ ಸ್ವಯಂ ಉದ್ಯೋಗದ ಮೂಲಕ ಪ್ರಗತಿಯನ್ನು ಕಾಣುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಸಹಕಾರದಿಂದ ಶಾದಿಭಾಗ್ಯ ಯೋಜನೆಯಡಿ ಕೊಡಗು ಜಿಲ್ಲೆಗೆ 2013ರಿಂದ 2017ರ ವರೆಗೆ 629 ಫಲಾನುಭವಿಗಳು 3.14 ಕೋಟಿ ರೂ., ಕ್ರೆಸ್ತ ಸಮುದಾಯದ 126 ಫಲಾನುಭವಿಗಳು 63 ಲಕ್ಷ ರೂ. ಅನುದಾನದ ಲಾಭ ಪಡೆದಿದ್ದಾರೆ ಎಂದರು.
ಜೈನರಿಗೆ 2.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆಯಾದರೂ ಫಲಾನು ಭವಿಗಳು ಬಾರದೆ ಹಣ ಬಾಕಿಯಾಗಿದ್ದು, ಅರ್ಹರು ಯೋಜನೆಯ ಲಾಭ ಪಡೆಯುವಂತೆ ಮನವಿ ಮಾಡಿದರು. 2017-18ನೇ ಸಾಲಿನಲ್ಲಿ ಜಿಲ್ಲೆಯ ಮದರಸಗಳಿಗೆ ಮೂಲಭೂತ ಸೌಲಭ್ಯ ಮತ್ತು ಕಂಪ್ಯೂಟರ್ ಸೇರಿದಂತೆ ಇತರ ಚಟುವಟಿಕೆಗಳಿಗೆ ತಲಾ ರೂ.10 ಲಕ್ಷದಂತೆ 58 ಮದರಸಾಗಳಿಗೆ 5.80 ಕೋಟಿ ರೂ. ಬಿಡುಗಡೆಯಾಗಿದೆ. ಚರ್ಚ್ ಗಳ ನವೀಕರಣಕ್ಕೆ ರೂ.1.35 ಕೋಟಿ, ಎರಡು ಮೊರಾರ್ಜಿ ಶಾಲೆಗಳಿಗೆ ರೂ. 21.10 ಕೋಟಿ, ಕುಶಾಲನಗರ ವಿದ್ಯಾರ್ಥಿ ನಿಲ¿ಕ್ಕಾಗಿ ರೂ.1 ಕೋಟಿ ನೀಡಲಾಗಿದೆ. ಮಾದಾಪುರ ಮಸೀದಿಗೆ 1 ಕೋಟಿ ರೂ. ಬಿಡುಗಡೆಯಾಗಿದೆ.
ಶಾದಿ ಮಹಲ್‌ಗಾಗಿ 2.77 ಕೋಟಿ ರೂ. 2017-18ರಲ್ಲಿ ಬಿಡುಗಡೆಯಾಗಿದೆ. ಮೌಲಾನಾ ಆಜಾ‚ದ್ ಭವನ ನಿರ್ಮಾಣಕ್ಕಾಗಿ ರೂ. 1.39 ಕೋಟಿ, ಅಲ್ಪಸಂಖ್ಯಾಕ ನಿರುದ್ಯೋಗಿ ಯುವಕರಿಗೆ 5 ಮಂದಿಗೆ ಟ್ಯಾಕ್ಸಿ ಹೊಂದಲು ತಲಾ 3 ಲಕ್ಷ ರೂ. ನೀಡಲಾಗಿದೆ. ವಕ್ಫ್ಬೋರ್ಡ್ ನಿಂದ ಮದರಸ, ಮಸೀದಿ ಅಭಿವೃದ್ಧಿ, ಕಬರಸ್ತಾನ್ ತಡೆಗೋಡೆ ನಿರ್ಮಾಣಕ್ಕೆ 4 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದಿಂದ ಸಾಲ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ವ್ಯವಸ್ಥೆಯನ್ನು ಅಲ್ಪಸಂಖ್ಯಾಕರು ಪಡೆದಿದ್ದಾರೆ. 94ಸಿ, 94 ಸಿಸಿ ಮೂಲಕ ಅನೇಕ ಅಲ್ಪಸಂಖ್ಯಾಖ ಫಲಾನುಭವಿಗಳು ಭೂಮಿಯ ಹಕ್ಕು ಪಡೆದು ತೃಪ್ತರಾಗಿದ್ದಾರೆ. ಈ ರೀತಿಯಾಗಿ ರಾಜ್ಯದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾಕರ ಏಳಿಗೆಗಾಗಿ ಕೋಟಿ, ಕೋಟಿ ಅನುದಾನವನ್ನು ನೀಡಿ ಸಾಮಾಜಿಕ ಭದ್ರತೆಯನ್ನು ನೀಡಿದೆ ಎಂದು ಕೆ.ಎ. ಯಾಕುಬ್ ತಿಳಿಸಿದರು. ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ನೀಡುವುದರೊಂದಿಗೆ ಆತ್ಮಸ್ಥೆ çರ್ಯವನ್ನು ತುಂಬಿದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರಕ್ಕೆ ಸಲ್ಲುತ್ತದೆ. ಇದೇ ಜನವರಿ 9 ರಂದು ಮುಖ್ಯಮಂತ್ರಿಗಳು ಮಡಿಕೇರಿಗೆ ಆಗಮಿಸಿ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಜಿಲ್ಲೆಯ ಸಮಸ್ತ ಅಲ್ಪಸಂಖ್ಯಾಕ ಬಂಧುಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿದೆ ಎಂದರು.
ನಾನೂ ಆಕಾಂಕ್ಷಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಸ್ಪರ್ಧಿಸಲು ನಾನೂ ಕೂಡ ಒಬ್ಬ ಆಕಾಂಕ್ಷಿಯೆಂದು ತಿಳಿಸಿದ ಕೆ.ಎ.ಯಾಕುಬ್ ಜಿಲ್ಲೆಯ ಎರಡು ಕ್ಷೇತ್ರ ಗಳಲ್ಲಿ ಯಾರು ಅಭ್ಯರ್ಥಿಗಳಾದರೂ ಅಲ್ಪಸಂಖ್ಯಾಕರ ಘಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಚುನಾವಣೆ ಸಂದರ್ಭ ಮತದಾನದಲ್ಲಿ ನಿರ್ಣಾಯಕರಾಗಿರುವ ಅಲ್ಪಸಂಖ್ಯಾಕರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನಮಾನ ನೀಡಿ ಎಂದು ಈಗಾಗಲೇ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ.
ಇದೀಗ ವಿಧಾನಸಭೆ ಚುನಾವಣೆ ಕೂಡ ಸಮೀಪಿಸುತ್ತಿದ್ದು, ಅಲ್ಪಸಂಖ್ಯಾ ಕರಿಗೂ ಸ್ಪರ್ಧಿಸಲು ಅವಕಾಶ ನೀಡಬೇಕೆನ್ನುವ ಅಭಿಲಾಷೆ ನಮ್ಮದು. ಆದರೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ಯಾರೇ ಸ್ಪರ್ಧಿಸಿದರೂ ಗೆಲ್ಲಿಸುವ ಶಕ್ತಿ ಅಲ್ಪಸಂಖ್ಯಾತರಿಗಿದೆ ಎಂದು ಕೆ.ಎ.ಯಾಕುಬ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಎಂ.ಎ. ಉಸ್ಮಾನ್ ಹಾಗೂ ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ಸುರಯ್ನಾ ಅಬ್ರಾರ್ ಉಪಸ್ಥಿತರಿದ್ದರು.