ಬೆಂಗಳೂರು: ಬಹುಚರ್ಚೆಗೆ ಗ್ರಾಸವಾಗಿದ್ದ ಹಾಗೂ ಹಲವು ಬಾರಿ ತಿರಸ್ಕೃತಗೊಂಡಿದ್ದ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಇರುವ ನಿಬಂಧನೆಗಳಿಗೆ ತಿದ್ದುಪಡಿ ತರುವ ಸಂಬಂಧದ ಪ್ರಸ್ತಾವನೆಗೆ ಕೊನೆಗೂ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಇದರೊಂದಿಗೆ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟೇ ಆ ವರ್ಗದ ವಿದ್ಯಾರ್ಥಿಗಳು ಇರಬೇಕೆಂಬ ನಿಯಮವನ್ನು ಕೈಬಿಡಲಾಗಿದೆ.
ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಗಳು ಎಂದು ಘೋಷಿಸಲು ಪ್ರಸ್ತುತ ಇರುವ ನಿಯಮ, ಆದೇಶಗಳ ಪ್ರಕಾರ ನಿಗದಿಪಡಿಸಿರುವ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಾಗುವುದು ಕಷ್ಟಕರವಾಗಿದೆ.
ಇದರಿಂದ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಅಡೆತ ಡೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇರುವ ನಿಬಂಧನೆಗಳನ್ನು ಸಡಿಲಗೊಳಿಸಿ “ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (1ನೇ ತಿದ್ದುಪಡಿ) ನಿಯಮಗಳು-2024′ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಮತೀಯ ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟು ಅಲ್ಪಸಂಖ್ಯಾಕ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತು ರದ್ದುಪಡಿಸಲಾಗಿದೆ. ಇನ್ನು ಅಲ್ಪಸಂಖ್ಯಾಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯಲ್ಲಿ ಮೂರನೇ ಎರಡರಷ್ಟು ಭಾಗ ಅಲ್ಪಸಂಖ್ಯಾಕರೇ ಇರಬೇಕು ಎಂಬ ನಿಯಮವನ್ನು ಅಲ್ಪಸಂಖ್ಯಾಕ ಕಾಲೇಜುಗಳಿಗೂ ವಿಸ್ತರಿಸಲಾಗಿದೆ ಎಂದು ಗುರುವಾರ ಸಚಿವ ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಈ ನಿಯಮಗಳ ತಿದ್ದುಪಡಿ ವಿಚಾರವು ಹಿಂದೆ ಹಲವು ಬಾರಿ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಆಗ ಹಲವು ಕಾರಣಗಳಿಂದ ಅನುಮೋದನೆ ದೊರೆತಿರಲಿಲ್ಲ. ಕಳೆದ ಬಾರಿ ವಕ್ಫ್ ಆಸ್ತಿ ವಿವಾದ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾಕರಿಗೆ ಮೀಸಲಾತಿ ಪ್ರಸ್ತಾವನೆ ಅಂಶಗಳು ಕೋಲಾಹಲ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು ಎನ್ನಲಾಗಿದೆ.