ಚನ್ನಪಟ್ಟಣ: ಅಪ್ರಾಪ್ತೆಯ ವಿವಾಹಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ, ವರ ಮತ್ತು ವರನ ಪೋಷಕರು ಸೇರಿದಂತೆ ನಾಲ್ವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಾಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ವೆಂಕಟೇಶ, ದಾಸೇಗೌಡ, ವೆಂಕಟಲಕ್ಷ್ಮಮ್ಮ ಮತ್ತು ಸವಿತಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಹುಚ್ಚಯ್ಯನದೊಡ್ಡಿ ಗ್ರಾಮದ ಗದ್ದೆಮಹದೇಶ್ವರ ದೇವಾಲಯದ ಬಳಿ ಮೇ 15ರಂದು 16 ವರ್ಷದ ಅಪ್ರಾಪ್ತೆಯ ಜೊತೆಗೆ ವೆಂಕಟೇಶ್ ನಡೆದಿತ್ತು. ಈ ವಿವಾಹದ ವಿಚಾರ ಕುರಿತು ಜಿಲ್ಲಾ ಮಕ್ಕಳ ಸಹಾಯವಾಣಿಗೆ ಮಾಹಿತಿ ದೊರೆತ್ತಿತ್ತು.
ಮಾಹಿತಿ ಆಧರಿಸಿ ವರದಿ ನೀಡಲು ಚನ್ನಪಟ್ಟಣ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ನಿರ್ದೇಶನ ನೀಡಲಾಗಿತ್ತು. ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಮೇ 16ರಂದು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಮುಂದೆ ಹಾಜರಾಗಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಯಾರೂ ಹಾಜರಾಗದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡು, ನಾಲ್ವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.